ಮೈಸೂರು: ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ (76) ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ನಿಧನರಾದರು.
ಮೂತ್ರಕೋಶದ ಸೋಂಕಿನ ಕಾರಣಕ್ಕೆ ಅವರು ಏ. 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಸೋಮವಾರ ಮುಂಜಾನೆ 1.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರಿನ ಜಯಲಕ್ಷ್ಮಿಪುರಂನ ಅವರ ನಿವಾಸಕ್ಕೆ ಮೃತದೇಹವನ್ನು ತರಲಾಗುತ್ತಿದ್ದು, ಬೆಳಿಗ್ಗೆ 8ರ ನಂತರ ಅಂತಿಮ ದರ್ಶನಕ್ಕೆ ಇಡಲಾಗುವುದು.
ಅವರಿಗೆ ಪತ್ನಿ ಭಾಗ್ಯಲಕ್ಷ್ಮಿ, ಪುತ್ರಿಯರಾದ ಪ್ರತಿಮಾ, ಪೂರ್ಣಿಮಾ, ಪೂನಂ ಹಾಗೂ ಅಳಿಯಂದಿರು ಇದ್ದಾರೆ.
1974ರಲ್ಲಿ ಕೆ.ಆರ್. ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಮೂಲಕ ರಾಜಕಾರಣ ಪ್ರವೇಶಿಸಿದ್ದ ಪ್ರಸಾದ್ ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. 1999ರಿಂದ 2004ರವರೆಗೆ ಕೇಂದ್ರದಲ್ಲಿ ಆಹಾರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
 
				 
         
         
         
															 
                     
                     
                    


































 
    
    
        