ನವದೆಹಲಿ: ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ನಾಮಪತ್ರ ಹಿಂಪಡೆದಿದ್ದಾರೆ. ಅಷ್ಟೇ ಅಲ್ಲದೆ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಧ್ಯಪ್ರದೇಶದ ಸಚಿವ ಮತ್ತು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ವಿಜಯವರ್ಗಿಯ ಅವರು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯಾಧ್ಯಕ್ಷ ವಿಡಿ ಶರ್ಮಾ ನೇತೃತ್ವದಲ್ಲಿ ಇಂದೋರ್ನ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರನ್ನು ಬಿಜೆಪಿಗೆ ಸ್ವಾಗತಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಅಕ್ಷಯ್ ಕಾಂತಿ ಬಾಮ್ ಅವರು ನಾಮಪತ್ರ ಹಿಂಪಡೆದ ಕೆಲವೇ ಗಂಟೆಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಮೇ 13 ರಂದು ಮತದಾನ ನಡೆಯಲಿದೆ. ಈ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ವಿರುದ್ಧ ಅಕ್ಷಯ್ ಕಾಂತಿಯವರನ್ನು ಕಾಂಗ್ರೆಸ್ ಸ್ಪರ್ಧೆಗಿಳಿಸಿತ್ತು.