ಮೈಸೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಚ್‌ಡಿ ರೇವಣ್ಣಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಎಚ್‌ಡಿ ರೇವಣ್ಣ ಮೇಲೆ ಈಗ ಅಪಹರಣದ ಪ್ರಕರಣ ದಾಖಲಾಗಿದೆ.
ಮೈಸೂರಿನ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ತಸ್ತೆಯ ಪುತ್ರ ಎಚ್‌ಡಿ ರೇವಣ್ಣ ವಿರುದ್ಧ ದೂರು ನೀಡಿದ್ದು, ಮೂರು ದಿನಗಳಿಂದ ತಮ್ಮ ತಾಯಿ ಅಪಹರಣವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಮಹಿಳೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋದಲ್ಲಿ ಇದ್ದಾಳೆ ಎನ್ನಲಾಗಿದೆ.
ಸಂತ್ರಸ್ತೆಯ ಪುತ್ರನ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದ್ದು, ಎಸ್‌ಐಟಿಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಯುವಕ ತನ್ನ ದೂರಿನಲ್ಲಿ ಪ್ರಜ್ವಲ್ ರೇವಣ್ಣ ನನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಇದರ ಫೋಟೋಗಳು ಬಹಿರಂಗ ಆಗಿದ್ದವು. ಅದಾದ ಬಳಿಕ ನನ್ನ ತಾಯಿ ನಾಪತ್ತೆಯಾಗಿದ್ದಾರೆ.
ಶಾಸಕ ಎಚ್‌ಡಿ ರೇವಣ್ಣ, ಪತ್ನಿ ಭವಾನಿ ರೇವಣ್ಣ ನನ್ನ ತಾಯಿಯನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿಸಿದ್ದಾನೆ. ಈ ಹಿನ್ನೆಲೆ ಕೆಆರ್ ನಗರ ಪೊಲೀಸರು ಎಚ್‌ಡಿ ರೇವಣ್ಣ ಹಾಗೂ ಸತೀಶ್ ಬಾಬಣ್ಣ ಎನ್ನುವವರ ಮೇಲೆ ಐಪಿಸಿ ಸೆಕ್ಷನ್ 364-ಎ, 365 ನಡಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ. ಎಚ್‌ಡಿ ರೇವಣ್ಣ ಆರೋಪಿ ನಂಬರ್ 1 ಆಗಿದ್ದರೆ, ಸತೀಶ್ ಬಾಬಣ್ಣ ಎನ್ನುವವರು ಆರೋಪಿ ನಂಬರ್ 2 ಆಗಿದ್ದಾರೆ. ಪ್ರಕರಣದ 2ನೇ ಆರೋಪಿ ಸತೀಶ್ ಬಾಬಣ್ಣ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.