ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ವೇಳಾಪಟ್ಟಿ ಪ್ರಕಟ

 

ಚಿತ್ರದುರ್ಗ: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು, ಜೂನ್ 3ರಂದು ಮತದಾನ ಜರುಗಲಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಮೇ 9 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 16 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಮೇ.17 ನಾಮ ಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 20 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದೆ. ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ಜರುಗಲಿದೆ. ಜೂನ್ 6 ರಂದು ಮತ ಎಣಿಕೆ ನಡೆಯಲಿದೆ. ಜೂನ್ 12 ರಂದು ಚುನಾವಣೆ ಪ್ರಕ್ರಿಯಗಳು ಪೂರ್ಣಗೊಳ್ಳಲಿವೆ. ಮೇ 2 ರಿಂದಲೇ ಮಾದರಿ ಸಂಹಿತೆ ಜಾರಿಯಲಿದೆ.

Advertisement

ಜಿಲ್ಲೆಯಲ್ಲಿ 4615 ಶಿಕ್ಷಕ ಮತದಾರರು: ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಆಗ್ನೆಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು 2023 ಡಿಸೆಂಬರ್ 30 ರಂದು ಈಗಾಗಲೇ ಪ್ರಕಟಿಸಲಾಗಿದೆ. ಅಂತಿಮ ಮತದಾರ ಪಟ್ಟಿಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 3238 ಪುರುಷರು, 1377 ಮಹಿಳೆಯರು ಸೇರಿದಂತೆ ಒಟ್ಟು 4615 ಶಿಕ್ಷಕ ಮತದಾರರು ಇದ್ದಾರೆ. ಇದರ ಅನ್ವಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ 210 ಪುರುಷರು, 43 ಮಹಿಳೆಯರು ಸೇರಿದಂತೆ ಒಟ್ಟು 253 ಶಿಕ್ಷಕ ಮತದಾರರು ಇದ್ದಾರೆ. ಚಳ್ಳಕರೆ ತಾಲ್ಲೂಕಿನಲ್ಲಿ 683 ಪುರುಷರು, 220 ಮಹಿಳೆಯರು ಸೇರಿ ಒಟ್ಟು 903 ಶಿಕ್ಷಕ ಮತದಾರರು ಇದ್ದಾರೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 929 ಪುರುಷರು, 590 ಮಹಿಳೆಯರು ಸೇರಿ ಒಟ್ಟು 1519 ಶಿಕ್ಷಕ ಮತದಾರರು ಇದ್ದಾರೆ. ಹಿರಿಯೂರು ತಾಲ್ಲೂಕಿನಲ್ಲಿ 571 ಪುರುಷರು, 251 ಮಹಿಳೆಯರು ಸೇರಿ ಒಟ್ಟು 822 ಶಿಕ್ಷಕ ಮತದಾರರು ಇದ್ದಾರೆ. ಹೊಸದುರ್ಗ ತಾಲ್ಲೂಕಿನಲ್ಲಿ 499 ಪುರುಷರು, 166 ಮಹಿಳೆಯರು ಸೇರಿ ಒಟ್ಟು 665 ಶಿಕ್ಷಕ ಮತದಾರರು ಇದ್ದಾರೆ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 346 ಪುರುಷರು, 107 ಮಹಿಳೆಯರು ಸೇರಿ ಒಟ್ಟು 453 ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4615 ಶಿಕ್ಷಕ ಮತದಾರರು ಇದ್ದಾರೆ.

ಮತದಾರರ ಪಟ್ಟಿಗೆ ಸೇರ್ಪಡೆಗೆ ಮೇ 6 ಕಡೆಯ ದಿನ: ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಮೇ 6 ಅಂತಿಮ ದಿನವಾಗಿದೆ. ಅರ್ಹ ಮತದಾರರು ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಜನವರಿ ತಿಂಗಳಿನಿಂದ ನಿರಂತರ ಪರಿಷ್ಕರಣೆಯಲ್ಲಿ ಸ್ವೀಕೃತವಾದ ಅರ್ಜಿಗಳು ಹಾಗೂ ಮೇ 6 ಸಂಜೆ 05:30 ಗಂಟೆಯವರೆಗೆ ಸ್ವೀಕರಿಸಲ್ಪಟ್ಟ ಅರ್ಜಿಗಳನ್ನು ನಿಯಮಾನುಸಾರ ಮತದಾರರಪಟ್ಟಿಗೆ ಸೇರ್ಪಡೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement