ಬೆಂಗಳೂರು : ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ನಿನ್ನೆಯೇ ಜಾಮೀನು ಮಂಜೂರಾಗಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಪ್ರಕರಣದ ಮುಖ್ಯ ಆರೋಪಿ ಶಾಸಕ ಹೆಚ್.ಡಿ.ರೇವಣ್ಣ ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇನ್ನು, ತಮ್ಮ ನಾಯಕನ ಆಗಮನಕ್ಕಾಗಿ ಪರಪ್ಪನ ಅಗ್ರಹಾರ ಜೈಲು ಬಳಿ ಬಂದು ಜಮಾಯಿಸಿದ್ದ ನೂರಾರು ಜೆಡಿಎಸ್ ಕಾರ್ಯಕರ್ತರು ಜೈಲು ಕಟ್ಟಡದ ಮುಖ್ಯ ದ್ವಾರದಿಂದ ರೇವಣ್ಣ ಹೊರ ಬರುತ್ತಿದ್ದಂತೆ ಕೇಕೆ ಹಾಕಲು ಆರಂಭಿಸಿದರು. ಮತ್ತೊಂದಷ್ಟು ಅವರ ಅಭಿಮಾನಿಗಳು ರೇವಣ್ಣ ಪರ ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ರೇವಣ್ಣ ಹೊರಗೆ ಬರುತ್ತಿದ್ದಂತೆ ಅವರನ್ನು ಸುತ್ತುವರಿಯಲೆತ್ನಿಸಿ ಗದ್ದಲ ಉಂಟು ಮಾಡಿದ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ರೇವಣ್ಣನವರ ಅಭಿಮಾನಿಗಳು ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಪರಪ್ಪನ ಅಗ್ರಹಾರದ ಬಳಿ ಕೆಲ ಹೊತ್ತು ಗದ್ದಲ ಗೌಜು ವಾತಾವರಣ ಕಂಡು ಬಂತು. ಪ್ರಜ್ವಲ್ ರೇವಣ್ಣ ರಾಸಲೀಲೆ ಪೆನ್ ಡ್ರೈವ್ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿ ಬೆದರಿಕೆ ಒಡ್ಡಿದ ಆರೋಪಕ್ಕೊಳಗಾಗಿರುವ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ಸದ್ಯ ಷರತ್ತುಬದ್ಧ ಜಾಮೀನಿನೊಂದಿಗೆ ಹೊರ ಬರುವ ಮೂಲಕ ತಾತ್ಕಾಲಿಕವಾಗಿ ನಿರಾಳರಾಗಿದ್ದರೂ ಪ್ರಕರಣದ ತಾರ್ಕಿಕ ಅಂತ್ಯವಾಗುವವರೆಗೂ ಎಸ್ ಐಟಿ ವಿಚಾರಣೆ ಎಂಬ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲಾಗದು.