ನವದೆಹಲಿ: 34,000 ಕೋಟಿ ರೂಪಾಯಿ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ತನಿಖೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಡಿಎಚ್ಎಫ್ಎಲ್ ಮಾಜಿ ನಿರ್ದೇಶಕ ಧೀರಜ್ ವಾಧವನ್ ಅವರನ್ನು ಬಂಧಿಸಿದೆ. ವಾಧವನ್ ಅವರನ್ನು ಸೋಮವಾರ ಸಂಜೆ ಮುಂಬೈನಿಂದ ಕಸ್ಟಡಿಗೆ ತೆಗೆದುಕೊಂಡಿತ್ತು. ವಿಚಾರಣೆ ಬಳಿಕ ಅಂದ್ರೆ ಮಂಗಳವಾರ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್ ವಾಧವನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 2022ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರಜ್ ವಾಧವನ್ ಅವರ ಮೇಲೆ ಈಗಾಗಲೇ ಸಿಬಿಐ ಚಾರ್ಜ್ಶೀಟ್ ದಾಖಲಿಸಿದೆ. ಯೆಸ್ ಬ್ಯಾಂಕ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರಜ್ ವಾಧವನ್ ಅವರನ್ನು ಈ ಹಿಂದೆ ಸಿಬಿಐ ಬಂಧಿಸಿತ್ತು. ಅವರು ಜಾಮೀನಿನ ಮೇಲೆ ಹೊರಗಿದ್ದರು. 17 ಬ್ಯಾಂಕ್ಗಳ ಒಕ್ಕೂಟಕ್ಕೆ 34,000 ಕೋಟಿ ರೂ. ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಡಿಎಚ್ಎಫ್ಎಲ್ ಪ್ರಕರಣವನ್ನು ದಾಖಲಿಸಿದ್ದು, ಇದು ದೇಶದ ಅತಿದೊಡ್ಡ ಬ್ಯಾಂಕಿಂಗ್ ಸಾಲ ವಂಚನೆಯಾಗಿದೆ.