ಹೈದರಾಬಾದ್: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ಅವರ ಪ್ರಿಯತಮ, ನಟ ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 12ರಂದು ನಡೆದ ಅಪಘಾತದ ಸಮಯದಲ್ಲಿ ನಟಿ ಪವಿತ್ರಾ ಜಯರಾಮ್ ಜೊತೆ ಗೆಳೆಯ ಚಂದು ಕೂಡ ಇದ್ದರು. ಅವರ ನಿಧನದಿಂದ ಮನನೊಂದಿದ್ದ ಚಂದ್ರಕಾಂತ್ ಅವರು ಶುಕ್ರವಾರ ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆ ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಚಂದು ಆತ್ಮಹತ್ಯೆಗೂ ಮುನ್ನ ಪವಿತ್ರಾ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದಾರೆ… ಹೋಗುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಸ್ತೆ ಅಪಘಾತಕ್ಕೂ ಮುನ್ನ ನಟಿ ಪವಿತ್ರ ತಮ್ಮ ಜನ್ಮದಿನಾಚರಣೆಗೆ ಚಂದು ಅವರನ್ನು ಆಹ್ವಾನಿಸಿದ್ದರು ಎನ್ನಲಾಗಿದೆ. ಕನ್ನಡದ ‘ರೋಬೊ ಫ್ಯಾಮಿಲಿ’ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು. ತೆಲುಗಿನ ಹಲವು ಧಾರಾವಾಹಿಗಳಲ್ಲಿ ಚಂದು ನಟಿಸುತ್ತಿದ್ದು, ಕೆಲ ಧಾರಾವಾಹಿಗಳಲ್ಲಿ ಚಂದು ಕೂಡ ಪವಿತ್ರಾರೊಂದಿಗೆ ನಟಿಸಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ ವಿಧಿ ಆಟಕ್ಕೆ ಇಬ್ಬರು ಜೀವ ಬಿಟ್ಟಿದ್ದಾರೆ.
