‘ನೀನು ಎಲ್ಲೇ ಇದ್ದರೂ ಬಂದು ಪೊಲೀಸರ ಮುಂದೆ ಶರಣಾಗು’- ಪ್ರಜ್ವಲ್‌ಗೆ ದೇವೇಗೌಡ ಸೂಚನೆ

ಬೆಂಗಳೂರು: ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೂಡಲೇ ವಿದೇಶದಿಂದ ವಾಪಸ್ ಆಗುವಂತೆ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪ್ರಜ್ವಲ್​ ರೇವಣ್ಣಗೆ ಎಚ್ಚರಿಕೆಯ ಬಹಿರಂಗ ಪತ್ರ ಬರೆದಿರುವ ಅವರು,  ನೀನು ಎಲ್ಲೇ ಇದ್ದರೂ ಬಂದು ಪೊಲೀಸರ ಮುಂದೆ ಶರಣಾಗು, ವಿಚಾರಣೆಯನ್ನು ಎದುರಿಸು ಎಂದು ಪ್ರಜ್ವಲ್ ರೇವಣ್ಣಗೆ  ಪತ್ರದಲ್ಲಿ ಸೂಚಿಸಿದ್ದಾರೆ.

ಕಳೆದ ವಾರ ಎಚ್​ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಕೈಮುಗಿದು ಮನವಿ ಮಾಡುತ್ತೇನೆ ನನ್ನ ಹಾಗೂ ಎಚ್​ಡಿ ದೇವೇಗೌಡರ ಮೇಲೆ ಗೌರವ ಇದ್ದರೆ 24 ಇಲ್ಲಾ 48 ಗಂಟೆಯಲ್ಲಿ ಬಂದು ಶರಣಾಗು ಎಂದು ಪ್ರಜ್ವಲ್​ ರೇವಣ್ಣಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅಜ್ಜ ದೇವೇಗೌಡರು ಕೂಡ ಪ್ರಜ್ವಲ್​ಗೆ ಎಚ್ಚರಿಕೆಯ ಬಹಿರಂಗ ಪತ್ರ ಬರೆದಿದ್ದಾರೆ.

Advertisement

ನಾನು ಮೇ 18ರಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಕುರಿತಾಗಿ ಮಾತನಾಡಿದ್ದೆ. ಆತ ನನಗೆ ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು. ನಾನು ಈಗಾಗಲೇ ಸ್ಪಷ್ಟಪಡಿಸಿರುವ ಹಾಗೆ ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನೆಂದಾದರೆ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ನನ್ನ ಮಗ ಮತ್ತು ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿಯವರು ಹಗರಣ ಹೊರಬಿದ್ದ ಮೊದಲ ದಿನವೇ ಪ್ರತಿಪಾದಿಸಿದ್ದಾರೆ.

ಈ ಕೆಲವು ವಾರಗಳಿಂದ ಜನರು ನನ್ನ ಮತ್ತು ನನ್ನ ಕುಟುಂಬದವರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೆಲ್ಲವೂ ನನಗೆ ತಿಳಿದಿದೆ. ನಾನು ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ನಾನು ಅವರನ್ನು ಟೀಕೆ ಮಾಡಲೂ ಹೋಗುವುದಿಲ್ಲ. ಈ ಹಗರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು ಎಂದು ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ. ಪ್ರಜ್ವಲ್​ನ ಚಟುವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ. ಅವನನ್ನು ರಕ್ಷಿಸುವ ಯಾವುದೇ ಇರಾದೆಯೂ ನನಗಿಲ್ಲ. ಅವನ ಈಗಿನ ಚಲನವಲನ ಮತ್ತು ಅವನ ವಿದೇಶ ಯಾತ್ರೆ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ನಾನು ರಾಜ್ಯದ ಜನರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಿಸುವೆ. ನನಗೆ ದೇವರಲ್ಲಿ ನಂಬಿಕೆ ಇದೆ ಮತ್ತಯ ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದಯ ನಾನು ನಂಬಿದ್ದೇನೆ ಎಂದು ಪ್ರಜ್ವಲ್‌ಗೆ ದೇವೇಗೌಡರು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement