ಚಿಕ್ಕಬಳ್ಳಾಪುರ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಿಡಿಯೋ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ಜೆಡಿಎಸ್ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ್ದು ಸಮಾಧಾನ ತಂದಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಶ್ಲೀಲ ವಿಡಿಯೋ ಸಂಬಂಧ ತನಿಖೆಗೆ ಹಾಜರಾಗಬೇಕು. ತಕ್ಷಣ ವಾಪಾಸ್ ಆಗಬೇಕು ಎಂದು ನಾನು ಪ್ರಜ್ವಲ್ ಗೆ ಸೂಚಿಸಿದ್ದೆ. ಸೂಚನೆಗೆ ಪ್ರಜ್ವಲ್ ರೇವಣ್ಣ ಸ್ಪಂದಿಸಿದ್ದಕ್ಕೆ ಸಮಾಧಾನವಾಗಿದೆ ಎಂದರು. ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದಿಂದ ಎಸ್ಐಟಿ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೋ ಕಾದು ನೋಡೋಣ ಎಂದು ಹೇಳಿದರು. ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನಲ್ಲೇ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದು, ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮೇ 31ರಂದು ಬೆಳಿಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗುತ್ತೇನೆ. ವಿದೇಶಕ್ಕೆ ಹೋಗುವುದು ಮೊದಲೇ ನಿಗದಿಯಾಗಿತ್ತು. ಯೂಟ್ಯೂಬ್ ನಲ್ಲಿ ನ್ಯೂಸ್ ಚಾನಲ್ ನೋಡುವಾಗ ವಿಷಯ ಗೊತ್ತಾಯಿತು. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.