ನವದೆಹಲಿ: ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅರ್ಜಿಯ ಪಟ್ಟಿಯನ್ನು ವಿಚಾರಣೆಗೆ ಹೆಚ್ಚಿನ ನಿರ್ದೇಶನಕ್ಕಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಕಳುಹಿಸಿದೆ ಎಂದು ತಿಳಿಸಿದೆ.ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ವೈದ್ಯಕೀಯ ಕಾರಣಗಳಿಗಾಗಿ ಜೂನ್ 1 ರಂದು ಮುಕ್ತಾಯಗೊಳ್ಳಲಿರುವ ಅವರ ಮಧ್ಯಂತರ ಜಾಮೀನಿಗೆ ಏಳು ದಿನಗಳ ವಿಸ್ತರಣೆಯನ್ನು ಕೋರಿದ್ದರು. ಇದರ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಜೆ.ಕೆ.ಮಹೇಶ್ವರಿ ಮತ್ತು ಕೆ.ವಿ.ವಿಶ್ವನಾಥನ್ ಅವರ ರಜಾಕಾಲದ ಪೀಠ ತುರ್ತು ವಿಚಾರಣೆಗೆ ನಿರಾಕರಿಸಿತು. ಪ್ರಕರಣವನ್ನು ನಾವು ಆಲಿಸಿದ್ದೇವೆ. ಆದರೆ ಇದನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕಾಗಿದೆ. ಈ ಹಿನ್ನೆಲೆ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.
 
				 
         
         
         
															 
                     
                     
                     
                     
                    


































 
    
    
        