“ಬಿಸಿ ಸುದ್ದಿ”  ಕನ್ನಡ website ಆರಂಭವಾಗಿ ಇಂದಿಗೆ ಜೂನ್ 1 ಕ್ಕೆ 10 ವರ್ಷದ ಸಂಭ್ರಮ

ಆತ್ಮೀಯ ಓದುಗ ದೊರೆಗಳೇ…. , ಬಿಸಿ ಸುದ್ದಿ ಕನ್ನಡ website ಆರಂಭವಾಗಿ ಜೂನ್ 1,  2024ಕ್ಕೆ 10 ವರ್ಷ ತುಂಬಿ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಈ ಹತ್ತು ವರ್ಷದಲ್ಲಿ ಹಲವು ಸವಾಲುಗಳು ಎದುರಾಗಿದ್ದು, ಅವುಗಳನ್ನು ಮೆಟ್ಟಿ ನಿಲ್ಲಲು ಆನೆಬಲದ ರೀತಿ ನಮ್ಮೊಂದಿಗೆ ನಿಂತಿದ್ದು ಓದುಗ ದೊರೆಗಳಾದ ನೀವುಗಳು.

ನೀವುಗಳು ತೋರಿದ ಅಭಿಮಾನ, ನೀಡಿದ ಬೆಂಬಲಕ್ಕೆ ಬಿಸಿ ಸುದ್ದಿ ತಂಡ ಎಂದಿಗೂ ಚಿರಋಣಿ ಆಗಿರಲಿದೆ.

Advertisement

ದಶಮಾನೋತ್ಸವದ ಈ ಸಂಭ್ರಮದಲ್ಲಿ ಬಿಸಿ ಸುದ್ದಿ ಸಂಸ್ಥಾಪಕ, ಸಂಪಾದಕನಾಗಿ ನಿಮ್ಮೊಂದಿಗೆ ಕೆಲ  ವಿಷಯಗಳನ್ನು ಹಂಚಿಕೊಳ್ಳುವುದು ನನ್ನ ಕರ್ತವ್ಯವಾಗಿದೆ.

ಹತ್ತು ವರ್ಷದಲ್ಲಿ ಅನುಭವಿಸಿದ ಸಂಕಷ್ಟಗಳು ನೂರಾರು. ಆದರೂ ನಿಮ್ಮಗಳ ಬೆಂಬಲದ ಫಲ ಇಂದು ಬಿಸಿ ಸುದ್ದಿ ರಾಜ್ಯದ ಅದರಲ್ಲೂ ಮಧ್ಯಕರ್ನಾಟಕದಲ್ಲಿ ಮನೆಮಾತಾಗಿದೆ.

ಅದರಲ್ಲೂ ನನ್ನ ಬದುಕು, ಬರಹ, ಹೋರಾಟದ ಹಾದಿ ಕುರಿತು ನಿಮ್ಮೊಂದಿಗೆ ಮಾತನಾಡಬೇಕೆಂಬ ತುಡಿತಕ್ಕೆ ಈ ಹತ್ತು ವರ್ಷ ತುಂಬಿದ ಸಂಭ್ರಮ ನೆಪವಾಗಿದೆ.

ನನ್ನ ಹುಟ್ಟೂರು ಒಂದು ಕಾಲದಲ್ಲಿ ಶೇಂಗಾ ಎಣ್ಣೆ ಮಿಲ್ ಗಳ ನಗರಿ ಎಂದೇ ದೇಶದಲ್ಲಿ ಖ್ಯಾತಿ ಗಳಿಸಿದ್ದ ಚಳ್ಳಕೆರೆ ನಗರ. ನನ್ನ ಅಪ್ಪ ಸಿದ್ರಾಮಪ್ಪ. ಅವರು ಕೂಡ ಎಣ್ಣೆ ಮಿಲ್ ಮಾಲೀಕರಾಗಿದ್ದರು. ಜೊತೆಗೆ ಮಂಡಿ ನಡೆಸುತ್ತಿದ್ದರು. ಹಣ, ಆಸ್ತಿಗೆ ಕೊರತೆ ಇಲ್ಲದ ಶ್ರೀಮಂತ ಕುಟುಂಬ‌ ನಮ್ನದು. ನನ್ನ ಅಮ್ಮ-ಅಪ್ಪನಿಗೆ ನನಗೆ ಒಳ್ಳೆ ಶಿಕ್ಷಣ ಕೊಡಿಸಬೇಕೆಂಬ ಆಸೆ. ಆದರೆ ನಾನು ಬಲುತುಂಟ. ಮಲ್ಲಾಡಿಹಳ್ಳಿ ಶಾಲೆಗೆ ಸೇರಿಸಿದ್ದರು. ಅಲ್ಲಿಂದ ಕಾಲ್ಕಿತ್ತು ಬೆಂಗಳೂರು ಸೇರಿ ತೆಲಗು ಫೀಲಂ ಹಿರೋ ರೀತಿ ಬೆಳೆಯಬೇಕೆಂದು ಹೋಟೆಲ್ ಸೇರಿದ್ದೇ. ಬಳಿಕ ಅಪ್ಪ ನನ್ನನ್ನು ಹುಡುಕಿ ಮನೆಗೆ ತರುವಲ್ಲಿ ಯಶಸ್ಸು ಕಂಡಿದ್ದರು.

ಊರಿಗೆ ಬಂದ ಬಳಿಕವೂ ಅಕ್ಷರ ಕಲಿಕೆಗಿಂತ ನಾಟಕ, ಫೀಲಂ ಹುಚ್ಚು ಹಚ್ಚಿಕೊಂಡು ನನ್ನ ಸಹಪಾಠಿ ಬಂಜಗೆರೆ ಜಯಪ್ರಕಾಶ್, ಚಳ್ಳಕೆರೆ ಯರ್ರಿಸ್ವಾಮಿ ಹೀಗೆ ಅನೇಕರನ್ನು ಹಾಕಿಕೊಂಡು ಚಲನಚಿತ್ರ ಮಾಡಿದೆ. ಬಿಡುಗಡೆ ಭಾಗ್ಯ ಕಾಣಲಿಲ್ಲ. ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಕಡೆ ಕ್ಯಾಸೆಟ್ ಕೊಟ್ಟು ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿ ನಾನು ನಿರಾಳನಾಗಿದ್ದೇ…

ಬಳಿಕ ಕಮ್ಯುನಿಷ್ಟ್, PVK, ಕರ್ನಾಟಕ ವಿಮೋಚನಾ ರಂಗ, ರೈತಸಂಘ, ಚಿತ್ರದುರ್ಗ ಭದ್ರಾ ಮೇಲ್ದಂಡೆ ಹೋರಾಟ ಸಮಿತಿಯಲ್ಲಿ ಬಂಜಗೆರೆ ಜಯಪ್ರಕಾಶ್ ಜೊತೆಗೂಡಿ ಚಳವಳಿಯನ್ನೇ ಬದುಕನ್ನಾಗಿಸಿಕೊಂಡೇ.

ಇತ್ತ ನಾನು ಹೋರಾಟದ ಹಾದಿ ಹಿಡಿದಿದ್ದರೇ ಅತ್ತ ಅಪ್ಪನಿಗೆ ವಯಸ್ಸು ಆಗಿ ಎಣ್ಣೆಮಿಲ್, ಮಂಡಿ ಬಾಗಿಲು ಮುಚ್ಚಿದವು. ಶ್ರೀಮಂತರ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ತೀವ್ರಗೊಂಡಿತು.

ಅದರ ಅರಿವೇ ಇಲ್ಲದಂತೆ ಮನೆಯಿಂದ ದುಡ್ಡು ತಂದು *ವಿಮೋಚನಾ ಸಂಗಾತಿ* ಪತ್ರಿಕೆ ಆರಂಭಿಸಿದೆ. ಹೋರಾಟ ಮತ್ತು ಪತ್ರಿಕೆ ನನ್ನ ಬದುಕು ಆಯ್ತು. ಪತ್ರಿಕೆ ನನ್ನ ಕೈಸುಟ್ಟಿತು.

ಒಂದು ನೆಮ್ಮದಿ ವಿಷಯ ಎಂದರೇ ಪತ್ರಿಕೆ ಕಚೇರಿಯಲ್ಲಿ ಬೆಳೆದ ನನ್ನ ಅನೇಕ ಹುಡುಗರು ಪ್ರಜಾವಾಣಿ, ಕನ್ನಡಪ್ರಭ, ವಿಜಯವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ ಸೇರಿದಂತೆ ದೊಡ್ಡ ದೊಡ್ಡ ಪತ್ರಿಕೆ ಹಾಗೂ ಟಿವಿ ಮಾಧ್ಯಮದಲ್ಲಿ ವರದಿಗಾರಿಕೆ ಸೇರಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇಷ್ಟೆಲ್ಲ ವಿಷಯ ಹೇಳಲು ಮುಖ್ಯ ಕಾರಣ ಪತ್ರಿಕರಾದವರಿಗೆ ಸಾಮಾಜಿಕ ಬದ್ಧತೆ ಇರಬೇಕು. ಅದು ನಿಸ್ವರ್ಥವಾಗಿರಬೇಕು ಎಂಬುದು ನನ್ನ ಆಶಯ.

ಹೋರಾಟದ ಜೊತೆ ಜೊತೆಗೆ ಕುಟುಂಬ ನಿರ್ವಹಣೆಗಾಗಿ ಅಗ್ನಿ, ಈ ನಮ್ಮ ಕನ್ನಡನಾಡು, ಪ್ರಜಾಪ್ರಗತಿ, ಸೂರ್ಯ ಹೀಗೆ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಶಶಿಧರ್ ಭಟ್ ಜೊತೆಗೆ Etv ಯಲ್ಲಿ  ಭಾನುಮತಿ ಕಾರ್ಯಕ್ರಮ ನಡೆಸಿಕೊಟ್ಟೇ.

ಎಲ್ಲ ಅವಕಾಶಗಳು ಬಾಗಿಲು ಹಾಕಿದಾಗ ದಿಕ್ಕು ತೋಚದೇ ದಿಗ್ಭ್ರಾಂತನಾಗಿದ್ದೇ. ಮನೆ‌ನಿರ್ವಹಣೆಗೆ ನನ್ನ ಪತ್ನಿ ಸುನೀತಾ ಒಬ್ಬಳೇ ಸಾರಥಿಯಾಗಿದ್ದಳು. ಈ ಸಂದರ್ಭ ಜೀವನದ ಬಂಡಿ ಭಾರವೇನಿಸಿತು. ಒಬ್ಬನೇ ಇದ್ದಾಗ ಕಣ್ಣುಗಳ ತುಂಬಾ ನೀರು ಹೆಚ್ಚಾಗಿ ಜಿನುಗುತ್ತಿತ್ತು. ಆ ಸಂಕಷ್ಟದ ಕ್ಷಣದಲ್ಲಿ ಹುಟ್ಡಿದ್ದೇ ನಾನ್ಯಾಕೆ website ಆರಂಭಿಸಬಾರದು ಎಂಬ ಚಿಂತನೆ.

ಈ ನನ್ನ ಕನಸಿಗೆ ನೀರು ಎರೆದು ಪೋಷಿಸಿದವರು ನನ್ನ ಆತ್ಮೀಯ ಗೆಳೆಯರು.

ಭೀತಿ ಮಧ್ಯೆ ಸ್ನೇಹಿತರೇ ಕೊಟ್ಟ ಹೆಸರು ಬಿಸಿ ಸುದ್ದಿ ಹೆಸರಲ್ಲಿ  website ಆರಂಭಿಸಿದೆ. ಅದು ಮಧ್ಯಕರ್ನಾಟಕದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆ ಬೇರೆ. ಇದು ಇನ್ನಷ್ಡು ನನ್ನನ್ನು ಆತಂಕಕ್ಕೆ ದೂಡಿತು.

ಭಯದಲ್ಲಿಯೇ ಚಿತ್ರದುರ್ಗ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಶ್ರೀ ಬಸಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಅಂದು ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಜೋಗಿಮಟ್ಡಿ ಈ.ಮಹೇಶಬಾಬು ಅಧ್ಯಕ್ಷತೆ ವಹಿಸಿದ್ದರು. ಜಿ.ಎನ್.ಮಲ್ಲಿಕಾರ್ಜನಪ್ಪ ಸಾಮಾಜಿಕ ಜಾಲತಾಣದ ಕುರಿತು ವಿಸ್ತಾರವಾಗಿ ಮಾತನಾಡಿದರು.‌ ನನ್ನ ಕಚೇರಿಯಲ್ಲಿ ಬೆಳೆದ ನನ್ನ ಪ್ರೀತಿಯ ಹುಡುಗರಾದ ನರೇನಹಳ್ಳಿ ಅರುಣಕುಮಾರ್, ಚಿಕ್ಕಪ್ಪನಹಳ್ಳಿ ಷಣ್ಮುಖ ಅತಿಥಿಗಳಾಗಿ ಶುಭಹಾರೈಸಿದರು. ಬಹಳಷ್ಟು ಹಿರಿಯರು, ಸ್ನೇಹಿತರು, ಕುಟುಂಬದ ಸದಸ್ಯರು ಪಾಲ್ಗೊಂಡು ನಾವಿದ್ದೇವೆ ಎಂದು ಅಭಯ ನೀಡಿದರು.

ಉದ್ಘಾಟನೆ ಮರುದಿನದಿಂದ ಸಾಲು-ಸಾಲು ಸವಾಲುಗಳು. ತಂತ್ರಜ್ಞಾನವೇ ಪ್ರಧಾನವಾದ wbsite ಕ್ಷೇತ್ರದಲ್ಲಿ ಮೊಳೆ ಜೋಡಿಸುವ ಪತ್ರಕರ್ತನಾಗಿದ್ದ ನನಗೆ ಎಲ್ಲವೂ ಹೊಸದು. ಜೊತೆಗೆ ಹಣದ ಸಮಸ್ಯೆ. ಆದರೂ ಎದೆಗುಂದದೇ ಓದುಗರಾದ ನೀವಿದ್ದೀರಾ ಎಂಬ ಧೈರ್ಯದಲ್ಲಿ ಮುನ್ನುಗ್ಗಿದೆ. ಸ್ನೇಹಿತರು ಸಾಥ್ ನೀಡಿದರು. ಎಲ್ಲ ಸವಾಲುಗಳ ಮಧ್ಯೆ Bcsuddi.com ಗೆ ಹತ್ತು ವರ್ಷ ವಯಸ್ಸಾಗಿದ್ದೇ ಗೊತ್ತಾಗಲಿಲ್ಲ.

ಈ ಮಧ್ಯೆ ವಿಶ್ವದ ಪ್ರಸಿದ್ಧ ಸಂಸ್ಥೆ ಗೂಗಲ್ ನಿಮ್ಮ ಬಿಸಿ ಸುದ್ದಿಯ ಬೆಳವಣಿಗೆಗೆ ಕೈಜೋಡಿಸಲು ಮುಂದಾಗಿದ್ದು ನಿಜಕ್ಕೂ ರೋಮಾಂಚನ.

ಅವರು ನೀಡಿದ ಆರ್ಥಿಕ ಸಹಾಯದ ಕಾರಣಕ್ಕೆ ನಗರದ ಹೃದಯಭಾಗ ಚಿತ್ರದುರ್ಗದ ಕೆಳಗೋಟೆ, ನಗರಾಭಿವೃದ್ಧಿ ಕಚೇರಿ ಎದರು ಕಚೇರಿ, ಸ್ಡುಡಿಯೋ ಆರಂಭವಾಗಿ ಕೆಲ ತಿಂಗಳು ಕಳೆದಿದೆ.

ಅಂದಿನ ಕಾರ್ಯಕ್ರಮಕ್ಕೆ ಸಾಣೇಹಳ್ಳಿ ಮಠದ ಡಾ. ಶ್ರೀ ಪಂಡಿರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕವಿ ಡಾ. ಬಂಜಗೆರೆ ಜಯಪ್ರಕಾಶ್, ಎಂಎಲ್ಸಿ ಕೆ.ಎಸ್.ನವೀನ್, ಎಂ.ಕೆ.ತಾಜಪೀರ್ ಹಾಗೂ ನೀವುಗಳು ಸಾಕ್ಷಿಯಾಗಿದ್ದು ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಸ್ಟುಡಿಯೋದಲ್ಕಿ ಅನೇಕ ಸ್ವಾಮೀಜಿ, ಗಣ್ಯರು, ಚಿಂತಕರ ಸಂದರ್ಶನ ನಡೆಸಲಾಗಿದೆ. ಇದು ನಿರಂತರವಾಗಿರಲಿದೆ. ಓದುಗರಾದ ನೀವುಗಳು ಬಿಡುವು ಮಾಡಿಕೊಂಡು ಕಚೇರಿಗೆ ಬಂದರೇ ನನಗೆ ಹೆಚ್ಚು ಖುಷಿ.

ಮಂಗಳೂರು, ಬೆಂಗಳೂರು, ದಾವಣಗೆರೆ,  ತುಮಕೂರಿನಲ್ಲಿನ ಪತ್ರಕರ್ತರು ಬಿಸಿ ಸುದ್ದಿ ಬಳಗದ ಸದಸ್ಯರಾಗಿದ್ದಾರೆ. ಸದಾ ಸುದ್ದಿ ಕೊಡುವ ಮೂಲಕ ಬಿಸಿ ಸುದ್ದಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಣ್ಣದಾಗಿ ಆರಂಭವಾದ Bcsuddi.com ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಇದಕ್ಕೆ ಮುಖ್ಯ ಕಾರಣಕರ್ತರು ಓದುಗರಾದ ನೀವುಗಳು.

ಎಂದಿನಂತೆ ನಿಮ್ಮ Bcsuddi ಬಳಗಕ್ಕೆ ನಿಮ್ಮ ಸಹಕಾರ, ಪ್ರೋತ್ಸಾಹದ ಮಾತುಗಳು ಇರಲಿ ಎಂಬುದು ನನ್ನ ಪ್ರಾರ್ಥನೆ.

 

ನಿಮ್ಮ

“ಚಳ್ಳಕೆರೆ ಬಸವರಾಜ್*

ಸಂಪಾದಕ

ಮೊ.ನಂ: 9916881352

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement