ಬೆಂಗಳೂರು: ವಾಹನಗಳ ಕಳ್ಳತನ, ಅಡ್ಡಾದಿಡ್ಡಿ ಚಾಲನೆ, ಅಪರಾಧ ಕೃತ್ಯಗಳಿಗೆ ವಾಹನಗಳ ಬಳಕೆ, ವಾಹನಗಳ ಸ್ಥಿತಿಗತಿ ತಿಳಿದುಕೊಳ್ಳುವುದು ಸೇರಿದಂತೆ ಮೊದಲಾದ ಕಾರಣಗಳಿಂದಾಗಿ ಸಾರಿಗೆ ಇಲಾಖೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳ ಅಳವಡಿಕೆಯನ್ನು ಈಗಾಗಲೇ ಕಡ್ಡಾಯಗೊಳಿಸಿ ಆದೇಶಿಸಿದೆ. ಆದರೆ, ಬೆಂಗಳೂರಿನಲ್ಲಿ ಒಂದು ಕೋಟಿಗೂ ಅಧಿಕ ವಾಹನಗಳಿದ್ದು, ಆ ಪೈಕಿ ಇಲ್ಲಿಯವರೆಗೆ ಬರೀ ನಲವತ್ತೊಂದು ಲಕ್ಷದಷ್ಟು ವಿವಿಧ ನಮೂನೆಯ ವಾಹನಗಳು ಹೆಚ್ ಎಸ್ ಆರ್ ಪಿ ನಾಮಫಲಕಗಳನ್ನು ಅಳವಡಿಸಿಕೊಂಡಿವೆ. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಮುಗಿದಿದ್ದರಿಂದ ಸರ್ಕಾರ ಈಗಾಗಲೇ ಎರಡು ಬಾರಿ ವಿಸ್ತರಣೆ ಮಾಡಿತ್ತು.
ಆದಾಗ್ಯೂ ನಿರೀಕ್ಷಿತ ಪ್ರಮಾಣದಲ್ಲಿ ವಾಹನ ಮಾಲೀಕರ ಸ್ಪಂದನೆ ಸಿಗದಾಯಿತು. ಅದಕ್ಕೆ ಕಾರಣಗಳೇನಿರಬಹುದೆಂದು ಸಾರಿಗೆ ಇಲಾಖೆ ಪರಾಮರ್ಶೆ ನಡೆಸಿದಾಗ, ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ತಯಾರಿಕೆಗೆಂದು ಸರ್ಕಾರ ವತಿಯಿಂದ ಗುತ್ತಿಗೆ ಪಡೆದ ಖಾಸಗಿ ಕಂಪನಿಗಳ ಕಾರ್ಯ ನಿಧಾನ ಗತಿಯಲ್ಲಿ ಸಾಗಿರುವುದು ಒಂದು ಕಡೆಯಾದರೆ, ನಕಲಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ತಯಾರು ಮಾಡಿಕೊಡುವ ಕಳ್ಳ ದಂಧೆ ನಡೆಯುತ್ತಿರೋದು ಪತ್ತೆಯಾಗಿದೆ. ಇದರಿಂದಾಗಿ ಸಾರಿಗೆ ಇಲಾಖೆ ತಲೆ ಕೆಡಿಸಿಕೊಳ್ಳುವಂತಾಗಿದೆ. 2019ಕ್ಕೂ ಮೊದಲು ನೋಂದಾವಣೆಯಗೊಂಡ ಎಲ್ಲ ರೀತಿಯ ವಾಹನಗಳು ಕೂಡಲೇ ಈಗಿರುವ ನಂಬರ್ ಪ್ಲೇಟ್ ಗಳನ್ನು ತೆಗೆದು ಹಾಕಿ ನೂತನ ಹೆಚ್ ಎಸ್ ಆರ್ ಪಿ ನಾಮಫಲಕಗಳನ್ನು ಇದೇ ತಿಂಗಳ 12 ರೊಳಗೆ ಅಳವಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತೆ ಎಂದು ಸಾರಿಗೆ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಸೂಷನೆಯನ್ನು ನಿರ್ಲಕ್ಷಿಸಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೊಳ್ಳದೇ ಸಿಕ್ಕಿ ಬಿದ್ದರೆ ಮೊದಲ ಸಲ 500 ರೂ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಒಂದು ಸಾವಿರ ರೂ.ಗಳ ದಂಡ ಪಾವತಿಸಬೇಕಾಗುತ್ತೆ!