ನವದೆಹಲಿ: ಚುನಾವಣಾ ಫಲಿತಾಂಶದ ಬಗ್ಗೆ ಎಲ್ಲರೂ ಕಾದು ನೋಡಬೇಕಿದೆ. ನಮ್ಮ ಫಲಿತಾಂಶವು ಮತಗಟ್ಟೆ ಸಮೀಕ್ಷೆಗಳಿಗೆ ವಿರುದ್ಧವಾಗಿರಲಿದೆ. ನಿಜವಾದ ಫಲಿತಾಂಶವನ್ನು ನೀವು ನಾಳೆ ನೋಡಲಿದ್ದೀರಿ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯು ಏಳು ಹಂತದಲ್ಲಿ ನಡೆದಿದ್ದು, ನಾಳೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆಗೆ ದೇಶದಾದ್ಯಂತ ಎಲ್ಲ ಕೇಂದ್ರಗಳಲ್ಲಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಎಲ್ಲಾ ಹಂತದ ಮತದಾನ ಮುಗಿದ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿತ್ತು. ಮತಗಟ್ಟೆ ಸಮೀಕ್ಷೆಗಳ ಪ್ರಕಾರ ದೇಶದಲ್ಲಿ ಎನ್‌ಡಿಎ ಸರ್ಕಾರ ರಚಿಸಲಿದೆ ಎಂದು ಹೇಳಲಾಗಿದೆ. ಹೀಗಾಗಿ ಸಮೀಕ್ಷಾ ವರದಿ ವಿರುದ್ಧ ಕಾಂಗ್ರೆಸ್ ಟೀಕೆ ವ್ಯಕ್ತಪಡಿಸಿದ್ದು, ಮತಗಟ್ಟೆ ಸಮೀಕ್ಷೆಗಳನ್ನು ಬೋಗಸ್ ಎಂದಿದೆ. ಈ ವರದಿಯು ಚುನಾವಣಾ ಅಕ್ರಮವನ್ನು ಸಮರ್ಥಿಸಿಕೊಳ್ಳುವ ಉದ್ದೇಶ ಪೂರ್ವಕ ಪ್ರಯತ್ನವಾಗಿದೆ. ಇಂಡಿಯಾ ಮೈತ್ರಿಕೂಟದ ಕಾರ್ಯಕರ್ತರ ಸ್ಟೈರ್ಯ ಕುಗ್ಗಿಸಲು ಪ್ರಧಾನಿ ಮೋದಿ ಅವರ ಒತ್ತಡ ತಂತ್ರದ ಭಾಗವಾಗಿದೆ ಎಂದು ತಿಳಿಸಿದೆ.
ಇನ್ನು ಮತಗಟ್ಟೆ ಸಮೀಕ್ಷೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದನ್ನು ಮತಗಟ್ಟೆ ಸಮೀಕ್ಷೆ ಎನ್ನಲಾಗುವುದಿಲ್ಲ. ಇದು ಮೋದಿ ಮಾಧ್ಯಮ ಸಮೀಕ್ಷೆ. ಇದು ಮೋದಿ ಅವರ ಸಮೀಕ್ಷೆ. ಅವರ ಕಾಲ್ಪನಿಕ ಸಮೀಕ್ಷೆಯಾಗಿದೆ. ಮತಗಟ್ಟೆ ಸಮೀಕ್ಷೆಗಳು ಚುನಾವಣಾ ಅಕ್ರಮವನ್ನು, ಇವಿಎಂಗಳ ಕೈವಾಡವನ್ನು ಸಮರ್ಥಿಸುವ ಉದ್ದೇಶ ಪೂರ್ವಕ ಪ್ರಯತ್ನ. ನಾವು ಹೆದರಿಕೊಳ್ಳುವುದಿಲ್ಲ. ಮತಗಟ್ಟೆ ಸಮೀಕ್ಷೆಗಳಿಗಿಂತ ಸಂಪೂರ್ಣ ಭಿನ್ನವಾದ, ನಿಜವಾದ ಫಲಿತಾಂಶವನ್ನು ಜೂನ್ 4ರಂದು ನೋಡಲಿದ್ದೀರಿ ಎಂದು ಹೇಳಿದ್ದರು.