ಬೆಂಗಳೂರು : ಕೇಂದ್ರ ಸಚಿವ ಸೋಮಣ್ಣ ಪುತ್ರನ ವಿರುದ್ಧ ವಂಚನೆ ಪ್ರಕರಣ ದಾಖಲು

ಬೆಂಗಳೂರು : ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ವಂಚಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ತೃಪ್ತಿ ಹೆಗಡೆ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ಅರ್ಜಿಯ ವಿಚಾರಣೆ ನಡೆಸಿದ ನಗರದ 37ನೇ ಎಸಿಎಂಎಂ ನ್ಯಾಯಾಲಯ ತನಿಖೆ ನಡೆಸುವಂತೆ ಆದೇಶಿಸಿತ್ತು.ಅದರನ್ವಯ ಅರುಣ್ ಸೋಮಣ್ಣ, ಜೀವನ್ ಕುಮಾರ್ ಹಾಗೂ ಪ್ರಮೋದ್ ರಾವ್ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 506, 34, 504, 387, 420, 477A, 323, 327,347 ಹಾಗೂ 354 (ದೈಹಿಕ ಹಿಂಸೆ, ಅವಮಾನ, ಜೀವಭಯ, ವಂಚನೆ, ಅಪಹರಣ) ಮತ್ತಿತರ ಆರೋಪಗಳಡಿ ಸಂಜಯ್ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರುದಾರೆಯಾದ ತೃಪ್ತಿ ಹಾಗೂ ಮಧ್ವರಾಜ್ ಎಂಬುವವರು ಸುಮಾರು 23 ವರ್ಷಗಳಿಂದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದು, 2013ರಲ್ಲಿ ಸರಕಾರಿ ಕಾರ್ಯಕ್ರಮವೊಂದನ್ನ ಆಯೋಜಿಸಿದ್ದಾಗ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರ ಪರಿಚಯವಾಗಿತ್ತು. 2017ರಲ್ಲಿ ಅರುಣ್ ಸೋಮಣ್ಣ ಪುತ್ರಿಯ ಹುಟ್ಟುಹಬ್ಬದ ಕಾರ್ಯಕ್ರಮವನ್ನ ಆಯೋಜಿಸುವ ಜವಾಬ್ಧಾರಿಯನ್ನ ಮಧ್ವರಾಜ್ ಒಡೆತನದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೇ ನಿರ್ವಹಿಸಿತ್ತು. ಉತ್ತಮ ಬಾಂಧವ್ಯವಿದ್ದಿದ್ದರಿಂದ ಅರುಣ್ ಸೋಮಣ್ಣ ಸಲಹೆ ಮೇರೆಗೆ 2019ರಲ್ಲಿ ಅರುಣ್ ಮತ್ತು ಮಧ್ವರಾಜ್ ಜಂಟಿಯಾಗಿ ನೈಬರ್‌ ಹುಡ್ ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಪಾರ್ಟನರ್ ಶಿಪ್ ಡೀಡ್ ಆಧಾರದಲ್ಲಿ ಆರಂಭಿಸಿದ್ದರು. ಕಂಪನಿಯಲ್ಲಿ ಮಧ್ವರಾಜ್ ಹೂಡಿಕೆ ಮಾಡಿರದ ಕಾರಣದಿಂದ ಹೂಡಿಕೆ, ಪಾವತಿಯ ಜವಾಬ್ದಾರಿಯನ್ನ ಅರುಣ್ ಸೋಮಣ್ಣ ಅವರೇ ವಹಿಸಿಕೊಂಡಿದ್ದರು. ನಂತರ ವ್ಯವಹಾರದಲ್ಲಿ ನಷ್ಟವಾದಾಗ ಮಧ್ವರಾಜ್, ಅರುಣ್ ಬಳಿ ವಿಚಾರಿಸಿದಾಗ ಯಾವುದೇ ಮಾಹಿತಿ ನೀಡಲಿಲ್ಲ. ಇದಾದ ಬಳಿಕ ಅರುಣ್, ಮಧ್ವರಾಜ್ ಅವರನ್ನು ಕಂಪನಿಯ ಪಾಲುದಾರಿಕೆಗೆ ರಾಜೀನಾಮೆ ಕೊಡುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೇ ಕಂಪನಿಗೆ ಹೊಸ ಪಾಲುದಾರರನ್ನು ಸೇರ್ಪಡೆ ಮಾಡಿಕೊಂಡು ಮಧ್ವರಾಜ್ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕಂಪನಿಯಲ್ಲಿ ಮಧ್ವರಾಜ್ ಅವರ ಲಾಭಾಂಶದ ಪ್ರಮಾಣವನ್ನು ಶೇ.30ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿತ್ತು.ಕಂಪನಿಯ ಕಚೇರಿ ಇರುವ ಜಾಗದ ಲೀಸ್ ಆಗ್ರಿಮೆಂಟ್ ಬದಲಾವಣೆ, ನಕಲಿ ದಾಖಲೆ ಬಳಸಿ ನೋಂದಣಿ ಹೀಗೆ ಹಲವು ಅಕ್ರಮಗಳನ್ನು ಎಸಗಲಾಗಿದೆ. ಗೂಂಡಾಗಳನ್ನ ಬಿಟ್ಟು ಮಧ್ವರಾಜ್ ಅವರನ್ನ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ’ ಎಂದು ತೃಪ್ತಿ ಅವರು ದೂರು ನೀಡಿದ್ದಾರೆ. ಸದ್ಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಆರೋಪಿತರ ವಿರುದ್ಧ ಜಾಮೀನು ರಹಿತ ಸೆಕ್ಷನ್ ಗಳಿರುವುದರಿಂದ ಸಚಿವ ಸೋಮಣ್ಣ ಅವರ ಪುತ್ರನಿಗೆ ಬಂಧನದ ಭೀತಿ ಎದುರಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement