ಬೆಂಗಳೂರು: ಲೋಕಸಭೆ ಸದಸ್ಯರಾಗಿ ಆಯ್ಕೆಗೊಂಡ ಹಿನ್ನೆಲೆ ಇಬ್ಬರು ಮಾಜಿ ಸಿಎಂಗಳು ಇಂದು ಸ್ಪೀಕರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. 2923 ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶಿಗ್ಗಾಂವಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇಂದು ರಾಜೀನಾಮೆ ಸಲ್ಲಿಸಿದವರು.
ಇನ್ನು, ಹಾವೇರಿ ಸಂಸದರಾಗಿ ಆಯ್ಕೆಗೊಂಡ ಬಸವರಾಜ ಬೊಮ್ಮಾಯಿ, ಮಂಡ್ಯ ಸಂಸದರಾಗಿ ಮತ್ತು ಕೇಂದ್ರದ ಸಚಿವರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿನಂದಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ ಅವರು ಸಂಸದರಾಗಿ ಹೆಚ್ಚಿನ ಜವಾಬ್ದಾರಿ ಬಂದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆನು ಎಂದರು.
ಇನ್ನು, ಇಬ್ಬರು ಶಾಸಕರಿಂದ ತೆರವಾದ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಗಳಿಗೆ ಆರು ತಿಂಗಳೊಳಗೆ ಉಪ ಚುನಾವಣೆ ನಡೆಸಬೇಕು. ಚನ್ನಪಟ್ಟಣಕ್ಕೆ ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಕಾಂಗ್ರೆಸ್ ನಿಂದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರು ಕೇಳಿ ಬರುತ್ತಿದೆ. ಆದರೆ, ತಮ್ಮ ಕುಟುಂಬದ ಹಿಡಿತದಿಂದ ಚನ್ನಪಟ್ಟಣ ಕ್ಷೇತ್ರ ಜಾರಿಹೋಗದಂತೆ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ರಾಜೀನಾಮೆ ನಂತರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದ ಶಾಸಕರನ್ನಾಗಿ ಮಾಡುವ ಆಲೋಚನೆಯಲ್ಲಿದ್ದಾರೆಂದು ಹೇಳಲಾಗುತ್ತೆ. ಅತ್ತ ಶಿಗ್ಗಾಂವಿಯಲ್ಲಿ ಅಭ್ಯರ್ಥಿಗಳು ಯಾರು? ಅನ್ನೋ ಚರ್ಚೆ ಮುನ್ನೆಲೆಗೆ ಬಂದಂತಿಲ್ಲ.