ಹೊಸದಿಲ್ಲಿ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿ ಕನಿಷ್ಠ 25 ಮಂದಿ ಮೃತಪಟ್ಟಿದ್ದು, ಇತರ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಪ್ರಕಟಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಇದೆ.
ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ್ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದ್ದಾರೆ.
ಮುಖ್ಯಮಂತ್ರಿ ಎಂ.ಕೆ.ಸ್ವಾಲಿನ್ ಈ ದುರಂತದ ಬಗ್ಗೆ ಆಘಾತ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. “ಕಲ್ಲಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಜನ ಸಾವಿಗೀಡಾದ ಸುದ್ದಿ ತಿಳಿದು ಆಘಾತ ಮತ್ತು ತೀವ್ರ ದುಃಖವಾಗಿದೆ. ಈ ಕೃತ್ಯದಲ್ಲಿ ಶಾಮೀಲಾಗಿರುವವರನ್ನು ಬಂಧಿಸಲಾಗುವುದು ಹಾಗೂ ಇದನ್ನು ತಡೆಯಲು ವಿಫಲವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ. ಇಂಥ ಕೃತ್ಯದಲ್ಲಿ ತೊಡಗಿದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಕೂಡಾ ತೀವ್ರ ಶೋಕ ವ್ಯಕ್ತಪಡಿಸಿದ್ದು, ಅಸ್ವಸ್ಥರು ಬೇಗನೇ ಗುಣಮುಖರಾಗುವಂತೆ ಹಾರೈಸಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಕಳ್ಳಭಟ್ಟಿ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.