ಮಾನಸಿಕ ಸದೃಢತೆ ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿ : ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್

 

ಚಿತ್ರದುರ್ಗ: ಯೋಗ ದೈಹಿಕವಾಗಿ ಶಕ್ತಿ ಹಾಗೂ ಚೈತನ್ಯ ತುಂಬುವದರ ಜೊತೆಗೆ ಮಾನಸಿಕವಾಗಿ ಸಹ ಸದೃಢರನ್ನಾಗಿಸುತ್ತದೆ. ಇಂದಿನ ನಿತ್ಯದ ಬದುಕಿನಲ್ಲಿ ಯುವ ಜನರಿಗೆ ಮಾನಸಿಕ ಶಕ್ತಿ ಅವಶ್ಯಕವಾಗಿದೆ. ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸದೃಢರಾಗಿರಲು ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಯುವಜನರು ಒತ್ತಡದಿಂದ ಹೃದಯಾಘಾತಕ್ಕೆ ಒಳಗಾಗುವುದು. ಜೀವನದ ಕಠಿಣ ಸಮಯ ಎದುರಿಸಲಾಗದೆ ಆತ್ಮಹತ್ಯೆ ಅಂತಹ ಕೃತ್ಯಗಳಿಗೆ ಮುಂದಾಗುವುದನ್ನು ದಿನ ನಿತ್ಯ ಕಾಣುತ್ತಿದ್ದೇವೆ. ಬಹಳಷ್ಟು ಯುವ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯೋಗದಿಂದ ಈ ಇವೆಲ್ಲವೂಗಳಿಗೂ ಪರಿಹಾರ ದೊರಕಲಿದೆ ಎಂದರು.

ಇದರ ಬದಲಾಗಿ ಜೀವನದಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಸದೃಢ ಮನೋಭಾವ ಹೊಂದಲು ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಯುವಜನತೆಯಲ್ಲಿ ಕ್ರೋಧ ಮತ್ಸರ, ದ್ವೇಷ, ಸಮಾಜ ಘಾತುಕ ಮನೋಭಾವ ಮೂಡದಂತೆ ಯೋಗಾಭ್ಯಾಸ ತಡೆಯುತ್ತದೆ. ಇದರಿಂದ ಯುವ ಜನತೆಗೆ ಲಾಭವಾಗುತ್ತದೆ ಎಂದು ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.

ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತದ್ದು, ವಿಶ್ವ ಸಂಸ್ಥೆ 2014 ರಲ್ಲಿ ಸರ್ವಾನುಮತದಿಂದ ಜೂನ್21ನ್ನು ಯೋಗ ದಿನಾಚರಣೆಯಾಗಿ ಘೋಷಣೆ ಮಾಡಿದೆ. ಇಂದು ವಿಶ್ವದ 187 ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗವನ್ನು ವಿಶ್ವದಾದ್ಯಂತ ಪಸರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು ಯೋಗವನ್ನು ಗ್ರಾಮ ಗ್ರಾಮಗಳಿಗೆ ಕೊಂಡೊಯ್ಯದರು. ರಾಜ್ಯದಲ್ಲಿ ಯೋಗವನ್ನು ಹೆಚ್ಚು ಪ್ರಚಾರ ಮಾಡಿದವರು ನಟ ಸಾರ್ವಭೌಮ ಡಾ.ರಾಜಕುಮಾರ್, ಅವರ ಕಾಮನಬಿಲ್ಲು ಎಂಬ ಚಲನಚಿತ್ರದಲ್ಲಿ ಸ್ವತಃ ಯೋಗ ಮಾಡುವುದರ ಮೂಲಕ ಎಲ್ಲರಿಗೂ ಪ್ರೇರಣೆಯಾದರು. ಇದೇ ಮಾದರಿಯಲ್ಲಿ ಇಂದು ಯೋಗಭ್ಯಾಸದಲ್ಲಿ ಪಾಲ್ಗೊಂಡ ಎಲ್ಲರೂ ಯೋಗ ರಾಯಭಾರಿಗಳಾಗಿ ಯೋಗವನ್ನು ಎಲ್ಲಡೆ ಪಸರಿಸಬೇಕು. ಮುಂದಿನ ಅಂತರಾಷ್ಟ್ರೀಯ ಯೋಗ ದಿನಾಚರಣೆ ವೇಳೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಜನರು ಸಾಮೂಹಿಕ ಯೋಗಾಭ್ಯಾಸದಲ್ಲಿ ತೊಡಗುವಂತಾಗಬೇಕು. ಆಯುಷ್ ಇಲಾಖೆ ಈ ಕಾರ್ಯ ಕೈಗೊಳ್ಳುವ ಮೂಲಕ ಇತರೆ ಜಿಲ್ಲೆಗಳಿಗೆ ಮಾದರಿಯಾಗಲಿ ಎಂದು ಕೆ.ಎಸ್.ನವೀನ್ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ, ಯೋಗವನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಿ ನೋಡಬಾರದು. ಇಂದು ವಿಶ್ವದ ಎಲ್ಲಾ ರಾಷ್ಟ್ರಗಳು ಯೋಗದ ಮಹತ್ವ ಅರಿತುಕೊಂಡಿವೆ. ಯುವ ಜನತೆ ಯೋಗದ ಬಗ್ಗೆ ಒಲವು ಬೆಳಸಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಕಾಲುಗಳಲ್ಲಿ ಅಡಗಿದೆ. ಯುವಕರು ದೇಹಕ್ಕೆ ಹಾನಿಕರವಾದ ದುಶ್ಚಟಗಳಿಂದ ದೂರ ಇರಬೇಕು ಎಂದರು.

ನಾಡಿನೆಲ್ಲೆಡೆ ಯೋಗವನ್ನು ಪ್ರಚಾರ ಮಾಡುವಲ್ಲಿ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಕೊಡುಗೆ ಮಹತ್ವದಾಗಿದೆ. ಶತಾಯುಷಿಗಳಾಗಿದ್ದ ಅವರು ತಮ್ಮ ಇಡೀ ಜೀವನವನ್ನು ಯೋಗಕ್ಕೆ ಮುಡಿಪಾಗಿಟ್ಟಿದ್ದರು. ಯೋಗಾಸಕ್ತರು ಮಲ್ಲಾಡಿಹಳ್ಳಿ ಆಶ್ರಮಕ್ಕೆ ಭೇಟಿ ನೀಡಿ ಅವರ ಯೋಗ ಸಾಧನೆಗಳನ್ನು ಅರಿಯಬೇಕು ಎಂದು ತಾಜ್‍ಪೀರ್ ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಯೋಗ ದೇಶದ ಸಾಂಸ್ಕøತಿಕತೆಯ ಪ್ರತೀಕವಾಗಿದೆ. ಯೋಗ ಅಂತರಾಷ್ಟ್ರೀಯ ಮನ್ನಣೆಗಳಿಸಿದೆ. ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಲು ಕರೆ ನೀಡಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ, ಪ್ರತಿ ಮನೆ ಮನೆಗಳಲ್ಲಿ ಯೋಗಭ್ಯಾಸ ಮಾಡಬೇಕು. ಯೋಗವು ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಿದೆ ಎಂದರು.

ವೇದಿಕೆಯಲ್ಲಿ ಚಿತ್ರದುರ್ಗ ಅಮೃತ ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ವಿಶೇಷ ಯೋಗ ನೃತ್ಯ ಪ್ರದರ್ಶಿಸಿದರು. ನಗರದ ನಿಸರ್ಗ ಯೋಗ ಕೇಂದ್ರದ 73 ವರ್ಷದ ಯೋಗಗುರು ಶಿವಲಿಂಗಪ್ಪ ವೇದಿಕೆ ಮೇಲೆ ಯೋಗಾಭ್ಯಾಸ ನೆಡಿಸಿ ಗಮನ ಸೆಳೆದರು.

ಯೋಗ ಶಿಕ್ಷಕ ಭರಮಸಾಗರದ ತಿಪ್ಪೇಸ್ವಾಮಿ ಸಾಮೂಹಿಕ ಯೋಗಭ್ಯಾಸ ಆಸನಗಳನ್ನು ಬೋಧಿಸುವ ಮೂಲಕ ಯೋಗದ ಮಹತ್ವ ತಿಳಿಸಿದರು. ಈ ಬಾರಿಯ ಯೋಗ ದಿನಾಚರಣೆಯ ಘೋಷವಾಕ್ಯ ಸ್ವಂತ ಹಾಗೂ ಸಮಾಜಕ್ಕಾಗಿ ಯೋಗ ಎನ್ನುವುದನ್ನು ಸಾರುವ ನಿಟ್ಟಿನಲ್ಲಿ 2000 ಕ್ಕೂ ಹೆಚ್ಚು ಯೋಗಾಸಕ್ತರು ಸುಮಾರು 45 ನಿಮಿಷಗಳ ಕಾಲ ಸಾಮೂಹಿಕ ಯೋಗಾಭ್ಯಾಸ ಮಾಡಿದರು. ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವೈದ್ಯಾಧಿಕಾರಿ ಗಿರೀಶ್ ಸ್ವಾಗತಿಸಿದರು. ವೈದ್ಯಾಧಿಕಾರಿ ಪ್ರಶಾಂತ್ ವಂದಿಸಿದರು.

ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಜೆ.ಕುಮಾರಸ್ವಾಮಿ, ಲಕ್ಷ್ಮೀನಾರಾಯಣ, ನಗರ ಸಭೆ ಆಯುಕ್ತೆ ಎಂ.ರೇಣುಕಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಸೇರಿದಂತೆ ವಿವಿಧ ಇಲಾಕೆ ಅಧಿಕಾರಿಗಳು, ಜಿಲ್ಲೆಯ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ಪಾಲ್ಗೊಂಡಿದ್ದರು.

 

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement