‘ರಾಜೀನಾಮೆ ಕುರಿತು ಸಿಎಂ ತಕ್ಷಣ ತೀರ್ಮಾನ ಮಾಡಲಿ’-ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಷಯದಲ್ಲಿ ಮುಖ್ಯಮಂತ್ರಿಗಳದು ಬೇಜವಾಬ್ದಾರಿ ನಡವಳಿಕೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಿಗಮದ ಹಗರಣವು ರೆಡ್ ಹ್ಯಾಂಡ್ ಆಗಿ ಸಿಕ್ಕಿದೆ. ಇದು ಆಪಾದನೆಯಲ್ಲ. ಇದು ಖಾತೆಗಳ ಮೂಲಕ ನೇರಾನೇರ ಸಿಕ್ಕಿದೆ. ಈ ರೀತಿ ಖಜಾನೆಯ ಹಣವನ್ನು ದುರ್ಬಳಕೆ ಮಾಡಿದ್ದೇ ಆದರೆ, ಒಂದು ನಿಮಿಷವೂ ಕೂಡ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯೋಗ್ಯರಲ್ಲ ಎಂದು ತಿಳಿಸಿದರು.

ನೀವು ಯೋಗ್ಯರಲ್ಲ ಅಂದ ಮೇಲೆ ಏನು ಮಾಡಬೇಕೆಂದು ನೀವೇ ತೀರ್ಮಾನಿಸಿ ಎಂದು ಸವಾಲು ಹಾಕಿದರು.ಆಪಾದನೆ ಕುರಿತು ತನಿಖೆ ನಡೆಯಲಿ. ನಿಮ್ಮ ಗೌರವ ಉಳಿಸಿಕೊಳ್ಳಲು ನೀವು ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳೇ ನಿರ್ವಹಿಸುವ ಆರ್ಥಿಕ ಇಲಾಖೆಗೆ ಗೊತ್ತಿಲ್ಲದೇ ವಾಲ್ಮೀಕಿ ನಿಗಮದ ಹಗರಣ ಆಗಲು ಸಾಧ್ಯವೇ ಇಲ್ಲ. ಆದರೆ, ಇದುವರೆಗೂ ನಿಮ್ಮ ಉತ್ತರ ಲಭಿಸಿಲ್ಲ. ಇದರಲ್ಲಿ ನಿಮ್ಮ ಪಾಲೆಷ್ಟು? ಹೈದರಾಬಾದ್‍ನ ಖಾತೆಗಳಿಗೆ ಯಾಕೆ ಹಣ ಹೋಗಿದೆ? ಇದನ್ನು ಚುನಾವಣೆಗಾಗಿ ಕಳಿಸಿದ್ದೇ? ಅಥವಾ ಬೇರೇನಾದರೂ ಉದ್ದೇಶವಿತ್ತೇ? ಎಂದು ಕೇಳಿದರು.

Advertisement

ಸರಕಾರದ ಹಣವನ್ನು ಬಾರ್ ಆಂಡ್ ರೆಸ್ಟೋರೆಂಟಿಗೂ ಹಾಕಿ ವಾಪಸ್ ಪಡೆಯುವುದಾದರೆ ಈ ರಾಜ್ಯದ ಜನರು ನಿಮ್ಮನ್ನು ಹೇಗೆ ನಂಬಬೇಕು? 11 ಜನರನ್ನು ಈಗಾಗಲೇ ಬಂಧಿಸಿದ್ದು, ಅಲ್ಲಿಗೇ ಅದು ಮುಕ್ತಾಯವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಹಗರಣಗಳು ಕಳೆದ ಒಂದೆರಡು ತಿಂಗಳುಗಳಿಂದ ಒಂದೊಂದಾಗಿ ಹೊರಗೆ ಬರುತ್ತಿವೆ. ಗುತ್ತಿಗೆದಾರರ ವಿಚಾರದಲ್ಲಿ ಯಾವ ಮಟ್ಟಕ್ಕೆ ಭ್ರಷ್ಟಾಚಾರ ಆಗಿತ್ತು, ಗುತ್ತಿಗೆದಾರರ ಸಂಘಗಳು ಮಾಡಿದ ಆಪಾದನೆಗಳನ್ನು ಬಯಲಿಗೆ ತರಲಾಗಿದೆ. ಅದಾದ ನಂತರ 187 ಕೋಟಿಯ ಹಗರಣ. ಅದು ಸುಮಾರು 700 ಖಾತೆಗಳಲ್ಲಿ ಹಾಕಿ ಡ್ರಾ ಮಾಡಲಾಗಿದೆ ಎಂದು ಆರೋಪಿಸಿದರು.

ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಯ ಬಳಿಕ ಇದರ ಸಂಪೂರ್ಣ ತನಿಖೆಗೆ ಆಗ್ರಹಿಸಿ ನಮ್ಮ ಹೋರಾಟ ನಡೆದಿತ್ತು. ಸಚಿವ ನಾಗೇಂದ್ರ ಅವರು ತಲೆದಂಡಕ್ಕೆ ಆಗ್ರಹಿಸಿದ್ದೆವು. ಅಲ್ಲಿಗೆ ನಿಂತು ಹೋಯಿತೇ ಮಾನ್ಯ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement