ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ಬೆಂಗಳೂರು ಏರ್ ಕಾರ್ಗೋ ಕಾಂಪ್ಲೆಕ್ಸ್ ನ ಮಾಜಿ ಸುಂಕ ಅಧೀಕ್ಷಕ ವಿ. ವಿಶ್ವೇಶ್ವರ ಭಟ್ ಅವರಿಗೆ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ, 26.25 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ಏರ್ ಕಸ್ಟಮ್ಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವೇಶ್ವರ ಅವರ ವಿರುದ್ಧ 2016ರ ಮಾರ್ಚ್ 31 ರಂದು ಸಿಬಿಐ ನಲ್ಲಿ ಕೇಸು ದಾಖಲಿಸಲಾಗಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿ 2017ರ ಸೆಪ್ಟೆಂಬರ್ ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. 2010 ಜನವರಿಯಿಂದ 2016ರ ಮಾರ್ಚ್ ವರೆಗೆ ವಿಶ್ವೇಶ್ವರ ಅವರು ಅಧೀಕ್ಷಕರಾಗಿ ಕಾರ್ಯನಿರ್ವಹಿಸುವ ವೇಳೆ ತಮ್ಮ ಆದಾಯಕ್ಕೂ ಮೀರಿ ಶೇ.61.94 ರಷ್ಟು(28.38 ಲಕ್ಷ ರೂ.) ಹೆಚ್ಚು ಆಸ್ತಿಯನ್ನು ಅಕ್ರಮವಾಗಿ ಗಳಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ