‘ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಮುಡಾ ಫ್ಯಾಕ್ಟರಿ ಶುರುವಾಯಿತು’- ಹೆಚ್‌ಡಿಕೆ

ಮೈಸೂರು: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲಾಗಿದೆ. ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಮುಡಾ ಫ್ಯಾಕ್ಟರಿ ಶುರುವಾಯಿತು ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಮೈಸೂರಿಗೆ ಆಗಮಿಸಿ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೈಟ್ ಹಗರಣಕ್ಕೆ ಸಂಬಂಧ ಪಟ್ಟಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಹೇಗೆ? ಇದರ ಹಿಂದೆ ಸಿಎಂ ಖುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ ಎಂದು ಆರೋಪಿಸಿದರು.

ಬಿಜೆಪಿಯವರು ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಹಗರಣ ಹೊರಗಡೆ ಬರಲು ಕಾಂಗ್ರೆಸ್‌ನವರೇ ಒಳಗಡೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ 14 ಸೈಟ್ ಹೇಗೆ ಬಂತು ಅಂತಲೂ ನನಗೆ ತಿಳಿದಿದೆ. 62 ಕೋಟಿ ರೂ. ಪರಿಹಾರ ಕೇಳುವ ಸಿಎಂ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದು ಅವರು ತಿಳಿಸಿದರು.

Advertisement

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಈಗ ಶಾಸಕರಾಗಿದ್ದಾರೆ. ಅವರು ಸಿಎಂ ಪರ ಸುದೀರ್ಘವಾಗಿ ಮಾತನಾಡಿ 62 ಕೋಟಿ ರೂ. ಪರಿಹಾರ ನೀಡಬೇಕು ಎಂದಿದ್ದಾರೆ. ಹಲವು ಕಡೆ ಅಭಿವೃದ್ಧಿ ಹೆಸರಿನಲ್ಲಿ ಭೂ ಸ್ವಾಧೀನವಾಗಿದ್ದರೂ ಆ ರೈತರು ಇನ್ನೂ ಕೂಡ ಬೀದಿಯಲ್ಲಿ ಅಲೆಯುತ್ತಿದ್ದಾರೆ. ಅವರ ಜಾಗಕ್ಕೆ ದರ ನಿಗದಿ ಮಾಡುವಾಗ ಹೀಗೆ ಮಾಡುತ್ತೀರಾ? ರೈತರನ್ನ ಬೀದಿಗೆ ನಿಲ್ಲಿಸಿರುವುದು ಸರಿಯೇ? ನಿಮ್ಮ ಪತ್ನಿಯ ಹಣ ಕೇಳುತ್ತಿದ್ದೀರಲ್ಲ. ಆ ದೇವರು ಮೆಚ್ಚುತ್ತಾನಾ ಎಂದು ಅವರು ಪ್ರಶ್ನೆ ಮಾಡಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement