ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಹಣ ರಾಜ್ಯ ಸರ್ಕಾರದ 5 ಗ್ಯಾರಂಟಿಗೆ – ವಿಪಕ್ಷಗಳಿಂದ ತೀವ್ರ ಆಕ್ಷೇಪ

ಬೆಂಗಳೂರು : ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ನಿಗದಿಯಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾರ್ಯಕ್ರಮಗಳಿಗಾಗಿ ಈ ವರ್ಷ 39,121.46 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮತಿ ನೀಡಲಾಗಿದೆ. ಈ ಪೈಕಿ ಪರಿಶಿಷ್ಟ ಜಾತಿಗೆ 27,673.93 ಕೋಟಿ ರೂ., ಪರಿಶಿಷ್ಟ ಪಂಗಡಕ್ಕೆ 11,445.51 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಈ ಪೈಕಿ 14,730.53 ಕೋಟಿ ರೂ.ಗಳನ್ನು ಸರ್ಕಾರದ 5 ಗ್ಯಾರಂಟಿ ಯೋಜನೆಗೆ ವರ್ಗಾಯಿಸಲಾಗಿದೆ. ಇದರ ಜತೆಗೆ ಭಾಗ್ಯಲಕ್ಷ್ಮಿ ಯೋಜನೆಗೆ 70.29 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 14,800.82 ಕೋಟಿ ರೂ. ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಉಪಯೋಜನೆಯಿಂದ ಅನ್ಯ ಕಾರ್ಯಕ್ಕೆ ಹಂಚಿಕೆ ಮಾಡಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌, ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಕಾನೂನು ಸಚಿವ ಎಚ್‌.ಕೆ. ಪಾಟೀಲ್‌, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಶಾಸಕರು ಭಾಗಿಯಾಗಿದ್ದ ಸಭೆಯಲ್ಲೇ ಈ ನಿರ್ಧಾರ ತೆಗೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಈ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಹಣವನ್ನು ನಾವು ಅದೇ ವರ್ಗದ ಜನತೆಗೆ ನೀಡುತ್ತೇವೆ. ಇದಕ್ಕಾಗಿ ಕಳೆದ ಬಾರಿ ಕಾಯ್ದೆಯ 7 (ಸಿ) ಗೆ ತಿದ್ದುಪಡಿ ಮಾಡಲಾಗಿದೆ. 7 (ಡಿ)ಗೆ ತಿದ್ದುಪಡಿ ತರುವಂತೆಯೂ ಆಗ್ರಹ ವ್ಯಕ್ತವಾಗಿದೆ. ಕಳೆದ ಬಾರಿ ನಿಗದಿಯಾಗಿದ್ದ ಹಣದಲ್ಲಿ 90 ಕೋಟಿ ರೂ. ಉಳಿಕೆಯಾಗಿದ್ದು, ಏಕೆ ಖರ್ಚು ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ ಎಂದರು. ಸುಮಾರು 15 ಸಾವಿರ ಕೋಟಿ ರೂ.ಗಳಷ್ಟು ದಲಿತರ ಹಣವನ್ನು ಅನ್ಯ ಉದ್ದೇಶಕ್ಕೆ ವೆಚ್ಚ ಮಾಡುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ತೆರಿಗೆ ಹೆಚ್ಚಳ ಮಾಡಿ ಸಾರ್ವಜನಿಕರ ಸುಲಿಗೆ ಮಾಡಿದವರು ಈಗ ದಲಿತರಿಗೆ ಮೀಸಲಿಟ್ಟ ಹಣವನ್ನೂ ಲೂಟಿ ಮಾಡಿದ್ದಾರೆ. ಗ್ಯಾರಂಟಿ ಸೋಗಿನಲ್ಲಿ ಇನ್ನೆಷ್ಟು ದಿನ ಈ ಬೃಹನ್ನಾಟಕ ಸ್ವಾಮಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement