ಬೆಂಗಳೂರು : ಏಳನೇ ವೇತನ ಆಯೋಗದ ವರದಿ, ಹಳೆ ಪಿಂಚಣಿ ವ್ಯವಸ್ಥೆ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಆಗ್ರಹಿಸಿ ಜುಲೈ 29 ರಿಂದ ʻಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ನೌಕರರು ನಿರ್ಧರಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ,7ನೇ ವೇತನ ಆಯೋಗ ವರದಿ ನೀಡಿ 19 ತಿಂಗಳುಗಳೇ ಕಳೆದರೂ ರಾಜ್ಯ ಸರಕಾರ ಇನ್ನೂ ಜಾರಿಗೊಳಿಸಿಲ್ಲ. ನೌಕರರಿಗೆ ಹಳೆ ಪಿಂಚಣಿ ಯೋಜನೆ ಮುಂದುವರಿಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿದಂತೆ ಯಾವುದೇ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಿಲ್ಲ ಹೀಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಎರಡು ಹಂತಗಳಲ್ಲಿ ಹೋರಾಟ ನಡೆಯಲಿದೆ. ಮೊದಲ ಹಂತವಾಗಿ ಜುಲೈ 8ರಿಂದ 14ರವರೆಗೆ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮನವಿ ಸಲ್ಲಿಕೆ ಆಂದೋಲನ ನಡೆಯಲಿದೆ. ಮನವಿ ಸಲ್ಲಿಕೆ ನಂತರ ಜುಲೈ 23ರಂದು ಬೆಂಗಳೂರಿನಲ್ಲಿ ಮತ್ತೊಮ್ಮೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು. ಸ್ಪಂದಿಸದಿದ್ದಲ್ಲಿ ಎರಡನೇ ಹಂತದ ಹೋರಾಟವಾಗಿ ಜುಲೈ 29ರಿಂದ ಕರ್ತವ್ಯಗೈರಾಗಿ ಮುಷ್ಕರ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.