ರಾಂಚಿ: ಜಾರ್ಖಂಡ್ ವಿಧಾನಸಭೆಯಲ್ಲಿ ಹೇಮಂತ್ ಸೊರೇನ್ ಸರ್ಕಾರವು ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದೆ.
81 ಸಂಖ್ಯಾಬಲ ಇರುವ ಜಾರ್ಖಂಡ್ ವಿಧಾನಸಭೆಯಲ್ಲಿ 45 ಶಾಸಕರು ಹೇಮಂತ್ ಸೊರೇನ್ ಸರ್ಕಾರದ ಪರ ವಿಶ್ವಾಸಮತ ಚಲಾಯಿಸಿದರು. ಪಕ್ಷೇತರ ಶಾಸಕ ಸರಯೂ ರಾಯ್ ಅವರು ವಿಶ್ವಾಸ ಮತ ಪ್ರಕ್ರಿಯೆಹಿಂದ ಹೊರಗುಳಿದರು. ಇನ್ನು ವಿಶ್ವಾಸಮತ ಸಾಬೀತಿಗೂ ಮುನ್ನವೇ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.
ಅಕ್ರಮ ಹಣ ವರ್ಗಾವಣೆ, ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳಿಂದ ಬಂಧಿತರಾಗಿದ್ದ ಹೇಮಂತ್ ಸೊರೆನ್ ಅವರು ಜಾಮೀನು ಪಡೆದು ಜೂನ್ 28ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಜಾಮೀನು ಪಡೆದ ಬೆನ್ನಲ್ಲೇ ಹೇಮಂತ್ ಸೊರೆನ್ ಅವರು ಜಾರ್ಖಂಡ್ನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು