ಚಿಕ್ಕಬಳ್ಳಾಪುರ: ಸಾರ್ವಜನಿಕವಾಗಿ ಮದ್ಯ ಹಂಚಿಕೆ ಅಕ್ಷಮ್ಯ ಮತ್ತು ಅಪರಾಧವಾಗಿದೆ. ನಾನು ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಎಂದಿಗೂ ಮದ್ಯ ಹಂಚಿಕೆ ಮಾಡಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿನಂದನಾ ಕಾರ್ಯಕ್ರಮವನ್ನು ನಾನು ಆಯೋಜನೆ ಮಾಡಿರಲಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನನ್ನ ಆಹ್ವಾನಿಸಿದರು. ನಾನು ಮತ್ತು ಆರ್.ಅಶೋಕ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮರಳಿದೆವು. ನಂತರ ಈ ಬೆಳವಣಿಗೆಗಳು ನಡೆದಿವೆ ಎಂದು ತಿಳಿಸಿದರು.
ನಾನು ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿ ತಿಳಿದೆ. ಯಾರು ಮದ್ಯ ಹಂಚಿದ್ದಾರೆ ಎಂದು ನನಗೆ ತಿಳಿದಿಲ್ಲ. ಮುಖಂಡರಿಗೂ ಕರೆ ಮಾಡಿ ಈ ರೀತಿಯಲ್ಲಿ ಮಾಡಬಾರದಿತ್ತು ಎಂದು ಹೇಳಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸುತ್ತೇವೆ ಎಂದರು.
ಇನ್ನು ಬಿಜೆಪಿ ಸಂಸದ ಡಾ ಕೆ. ಸುಧಾಕರ್ ಅವರು ಕಾರ್ಯಕರ್ತರಿಗೆ ಮದ್ಯ ಹಂಚಿಕೆ ಮಾಡಿರುವ ಬಗ್ಗೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಉತ್ತರಿಸಬೇಕು. ಮದ್ಯ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವುದು ಬೇರೆ ವಿಚಾರ. ಆದರೆ ಬಿಜೆಪಿ ಪ್ರಮುಖ ನಾಯಕರು ಇದಕ್ಕೆ ಸ್ಪಷ್ಟನೆ ನೀಡಬೇಕು. ಬಿಜೆಪಿಯ ಇಂಥ ಸಂಸ್ಕೃತಿ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರಿಗಿಂತ ರಾಷ್ಟ್ರೀಯ ನಾಯಕರು ಉತ್ತರಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಒತ್ತಾಯಿಸಿದರು.