ಮೈಸೂರು:ಮುಡಾ ಹಗರಣ ಸಿಎಂ ಸಿದ್ದರಾಮಯ್ಯಗೆ ಕಂಟಕವಾಗಿ ಪರಿಣಮಿಸುತ್ತಿದ್ದು, ಇದೀಗ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿ ಮೂಲಕ ಮುಡಾ ವಂಚಿಸಿ ಕೋಟ್ಯಂತರ ಬೆಲೆಯ ನಿವೇಶನ ಪಡೆದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂ ಮಾಲೀಕ ಎಂದು ಹೇಳುವ ದೇವರಾಜು ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಾಗಿದೆ.
ಇದೇ ಪ್ರಕರಣದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪ ನೊಂದಣಾಧಿಕಾರಿ ಹಾಗೂ ಮುಡಾ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆಯೂ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬವರು ದೂರು ದಾಖಲಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿದ್ದಷ್ಟೇ ಅಲ್ಲದೆ, ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ಸ್ನೇಹಮಯಿಕೃಷ್ಣ ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.