ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾಯಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಪತ್ರ ಬರೆದಿದ್ದಾರೆ.
ಅಭಿವೃದ್ಧಿಯ ದೃಷ್ಟಿಯಿಂದ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲಾಗುತ್ತದೆ ಎಂಬ ವಿಚಾರಗಳು ಇತ್ತೀಚೆಗೆ ಕೇಳಿ ಬರುತ್ತಿದ್ದು, ಜಿಲ್ಲೆಯ ಹೆಸರು ಬದಲಾಯಿಸುವ ಪ್ರಸ್ತಾವನೆಯನ್ನು ಪರಿಗಣಿಸದಂತೆ ನೂತನ ಸಂಸದರು ಒತ್ತಾಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ಜಿಲ್ಲೆಯ ಹೆಸರನ್ನು ಕ್ಲೋಸ್ ಪೇಟೆಯಿಂದ ರಾಮನಗರ ಎಂದು ಬದಲಾಯಿಸಿದ್ದಾರೆ. ರಾಮನಗರ ಎಂಬ ಹೆಸರಿನಲ್ಲಿ ಅಲ್ಲಿನ ಜನರಿಗೆ ಒಂದು ಭಾವನಾತ್ಮಕ ನಂಟಿದೆ. ರಾಮನಗರದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚುನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟಿದ್ದು, ನಾಡಪ್ರಭು ಕೆಂಪೇಗೌಡ ಕೂಡ ಈ ಭಾಗದವರೇ ಆಗಿದ್ದಾರೆ. ರಾಮನಗರವು ಈ ರಾಜ್ಯಕ್ಕೆ ಐವರು ಸಿಎಂಗಳ ಕೊಡುಗೆ ನೀಡಿದೆ ಎಂಬುವುದು ಗಮನಾರ್ಹ.
ರಾಮನಗರಕ್ಕೆ ತನ್ನದೇ ಆದ ಧಾರ್ಮಿಕ ಇತಿಹಾಸವಿದ್ದು , ಕಣ್ವ ಮಹರ್ಷಿಯ ಸ್ಥಳ ಮತ್ತು ರಾಮಗಿರಿ ಬೆಟ್ಟದಲ್ಲಿ ರಾಮನು ತಂಗಿದ್ದ ಎಂಬ ಪ್ರತೀತಿಯೂ ಇದೆ. ಜೆಡಿಎಸ್ ನಾಯಕ ಎಚ್‌ಡಿ ದೇವೇಗೌಡರು ಈ ಕ್ಷೇತ್ರದಿಂದಲೇ ಸಂಸದರಾಗಿ ಗೆದ್ದು ಪ್ರಧಾನಿಯಾದರು. ಐತಿಹಾಸಿಕವಾಗಿರುವ ಈ ಜಿಲ್ಲೆಗೆ ಮರುನಾಮಕರಣ ಮಾಡುವುದು ಸರಿಯಾದ ನಿರ್ಧಾರವಲ್ಲ ಎಂದು ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.