ಬೆಂಗಳೂರು: ಸದ್ಯಕ್ಕೆ ಸರ್ಕಾರಿ ಬಸ್ ಗಳ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ರಾಜು ಕಾಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜು ಕಾಗೆ ದರ ಏರಿಕೆ ಬಗ್ಗೆ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಜು ಕಾಗೆ ಅವರು, ಕರ್ನಾಟಕ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದು ಒಂದು ವರ್ಷ ಕಳೆಯಿತು. ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಗೆ ನಷ್ಟವಾಗಿದೆ. ಹೀಗಾಗಿ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ. ಶಕ್ತಿ ಯೋಜನೆಯಿಂದ ನಿಗಮ ನಷ್ಟದಲ್ಲಿದೆ. ಡೀಸೆಲ್ ಹಾಗೂ ಬಸ್ ನ ಬಿಡಿ ಭಾಗಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ೧೦ ವರ್ಷಗಳಿಂದ ಬಸ್ ಟಿಕೆಟ್ ದರ ಏರಿಕೆ ಮಾಡಿಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಆಸ್ತಿ ಪರಭಾರೆ ಮಾಡುತ್ತೇವೆ. ಸಂಸ್ಥೆಗೆ ಸೇರಿದ ಹಳೇ ಕಟ್ಟಡಗಳನ್ನು ನವೀಕರಿಸಿ ಬಾಡಿಗೆ ಕೊಡುತ್ತೇವೆ ಎಂದು ತಿಳಿಸಿದ್ದರು.