ಮಂಗಳೂರು: ಹಿರಿಯ ರಂಗನಿರ್ದೇಶಕ ‘ಗುಡ್ಡದ ಭೂತ’ದ ಸೃಷ್ಟಿಕರ್ತ ಸದಾನಂದ ಸುವರ್ಣ ನಿಧನ

ಮಂಗಳೂರು: ಹಿರಿಯ ರಂಗನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ಸಿನಿಮಾ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ (93) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಮಧ್ಯಾಹ್ನ 1ರಿಂದ 3ರವರೆಗೆ ಪುರಭವನದಲ್ಲಿ ವ್ಯವಸ್ಥೆ ಮಾಡಲಾಗುವುದು. ಬಳಿಕ ಅವರ ಬಯಕೆಯಂತೆ ದೇಹದಾನವನ್ನು ಮಾಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಕನ್ನಡದಲ್ಲಿ ಅತ್ಯಂತ ಯಶಸ್ವಿ ರಂಗಭೂಮಿ ನಿರ್ದೇಶಕರಾಗಿ ನೂರಾರು ನಾಟಕಗಳನ್ನು ನಿರ್ದೇಶಿಸಿದ ಇವರು ಕೋರ್ಟ್‌ಮಾರ್ಷಲ್, ಉರುಳು, ಮಳೆನಿಲ್ಲುವವರೆಗೆ, ಗುಡ್ಡದ ಭೂತ, ಸುಳಿ ಮುಂತಾದವು ಪ್ರಯೋಗಾತ್ಮಕ, ಸದಭಿರುಚಿಯ ನಾಟಕಗಳು. ಸದಾನಂದ ಸುವರ್ಣ ಅವರು ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ ಸಿನಿಮಾಕ್ಕೆ ನಿರ್ಮಾಪಕರಾಗುವ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. ಈ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾವೆಂದು ಸ್ವರ್ಣಕಮಲ ಪ್ರಶಸ್ತಿ ಲಭಿಸಿತ್ತು. ಬಳಿಕ ಕಾಸರವಳ್ಳಿಯವರ ತಬರನ ಕತೆ, ಮನೆ, ಕ್ರೌರ‌್ಯ ಮುಂತಾದ ಸಿನಿಮಾಗಳಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಅನುವಭವ ಪಡೆದವರು. ಬಳಿಕ ಕುಬಿ ಮತ್ತು ಇಯಾಲ ಎಂಬ ಸದಭಿರುಚಿಯ ಚಿತ್ರ ನಿರ್ದೇಶಿಸಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಈ ಸಿನಿಮಾಕ್ಕೆ ನಾಲ್ಕು ಪ್ರಶಸ್ತಿ ಬಂದಿತ್ತು. ಬಳಿಕ ಇವರು ನಿರ್ದೇಶಿಸಿದ ಗುಡ್ಡದ ಭೂತ ಟೆಲಿಚಿತ್ರ ಜನಮನ್ನಣೆ ಗಳಿಸಿದ್ದು ಮಾತ್ರವಲ್ಲದೆ ಉತ್ತಮ ಧಾರಾವಾಹಿ ಪ್ರಶಸ್ತಿಯನ್ನು ಪಡೆದಿತ್ತು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯವರಾದ ಸದಾನಂದ ಸುವರ್ಣ ಮುಂಬಯಿಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದವರು. ಅಲ್ಲಿ ರಾತ್ರಿಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ 5ವರ್ಷ ಕೆಲಸ ಮಾಡಿ, 3 ದಶಕಗಳ ಕಾಲ ಬಣ್ಣದ ವ್ಯಾಪಾರಿಯಾಗಿದ್ದರು. ಬಳಿಕ ನಾಟಕ ರಚನೆ, ನಟನೆ, ನಿರ್ದೇಶನದಲ್ಲಿ ಐದು ದಶಕಗಳ ಕಾಲ ಶ್ರಮಿಸಿದ ಅವರು ಮುಂಬೈ ತೊರೆದು ಮಂಗಳೂರಿನಲ್ಲಿ ನೆಲೆಸಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement