ಗ್ಯಾಂಗ್ಟಾಕ್: ನಾಪತ್ತೆಯಾಗಿದ್ದ ಸಿಕ್ಕಿಂನ ಮಾಜಿ ಸಚಿವ ಆರ್.ಸಿ ಪೌಡ್ಯಾಲ್ (80) ಅವರ ಶವ ಪಶ್ಚಿಮ ಬಂಗಾಳದ ಸಿಲಿಗುರಿಯ ಸಮೀಪ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಜಿ ಸಚಿವ ಪೌಡ್ಯಾಲ್ ಅವರ ಮೃತದೇಹವು ತೀಸ್ತಾ ನದಿಯಿಂದ ಕಾಲುವೆಗೆ ತೇಲಿ ಬಂದಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ವಾಚ್ ಮತ್ತು ಧರಿಸಿದ್ದ ಬಟ್ಟೆಗಳಿಂದ ಪೌಡ್ಯಾಲ್ ಅವರ ಮೃತದೇಹದ ಗುರುತು ಪತ್ತೆ ಮಾಡಲಾಗಿದೆ. ಜು.7 ರಂದು ಪಾಕ್ಯೊಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್ ನಿಂದ ನಾಪತ್ತೆಯಾಗಿದ್ದ ಪೌಡ್ಯಾಲ್ ಅವರನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ಆದರೆ ಇದೀಗ ಅವರು ಶವವಾಗಿ ಪತ್ತೆಯಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಂ ವಿಧಾನಸಭೆಯಲ್ಲಿ ಪೌಡ್ಯಾಲ್ ಅವರು ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸಿಕ್ಕಿಂನ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 70 ಮತ್ತು 80ರ ದಶಕದಲ್ಲಿ ರೈಸಿಂಗ್ ಸನ್ ಪಾರ್ಟಿಯನ್ನು ಅವರು ಸ್ಥಾಪಿಸಿದರು. ಈ ಮೂಲಕ ಸಿಕ್ಕಿಂನ ರಾಜಕೀಯ ಪ್ರಮುಖರಲ್ಲಿ ಪೌಡ್ಯಾಲ್ ಅವರು ಕೂಡ ಒಬ್ಬರಾಗಿದ್ದಾರೆ.
ಇನ್ನು ಪೌಡ್ಯಾಲ್ ಅವರ ನಿಧನಕ್ಕೆ ಸಿಕ್ಕಿಂನ ಸಿಎಂ ಪಿಎಸ್ ತಮಾಂಗ್ ಸಂತಾಪ ಸೂಚಿಸಿದ್ದಾರೆ. “ಸಚಿವರಾಗಿಯೂ ಸೇರಿದಂತೆ ಸಿಕ್ಕಿಂ ಸರ್ಕಾರಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಜುಲ್ಕೆ ಘಮ್ ಪಕ್ಷದ ನಾಯಕರಾಗಿದ್ದ ಪೌಡ್ಯಾಲ್ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.