ಭರ್ಜರಿ ಮಳೆಯಿಂದ ಕಾವೇರಿಗೆ ಜೀವಕಳೆ; ಕೆ ಆರ್‌ ಎಸ್‌ ಡ್ಯಾಂ ಸಂಪೂರ್ಣ ಭರ್ತಿ

ಮಂಡ್ಯ: ಕಳೆದ ವರ್ಷ ಸರಿಯಾಗಿ ಮಳೆಯಾಗದೇ ಜೀವಕಳೆ ಕಳೆದುಕೊಂಡಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೃಷ್ಣರಾಜಸಾಗರ ಜಲಾಶಯ (ಕೆಆರ್​ಎಸ್​) ಈ ಬಾರಿ ವರುಣನ ಕೃಪೆಯಿಂದ ಸಂಪೂರ್ಣ ಭರ್ತಿಯಾಗಿದೆ.

ಜಲಾಶಯದ ನೀರಿನ ಮಟ್ಟ 124 ಅಡಿಗೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಳೆಯಾದ್ದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿ ಡ್ಯಾಂ ತುಂಬಿದೆ. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆ ಒಳಹರಿವು ಕ್ಷೀಣಿಸಿದ್ದು, ಹೊರ ಹರಿವಿನ ಪ್ರಮಾಣವನ್ನು ಇಳಿಸಲಾಗಿದೆ. ನಿನ್ನೆ 40 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ, ಇದೀಗ 31 ಸಾವಿರ ಕ್ಯೂಸೆಕ್​ಗೆ ತಗ್ಗಿದೆ.

ಕೆಆರ್​ಎಸ್​ ಡ್ಯಾಂ ತುಂಬಿರುವುದು ರಾಜ್ಯದ ಜನತೆಯ ಪಾಲಿಗೆ ಅದರಲ್ಲೂ ಬೆಂಗಳೂರಿನ ಜನತೆಗೆ ಇದಕ್ಕಿಂತ ಖುಷಿಯ ಸಂಗತಿ ಮತ್ತೊಂದಿಲ್ಲ. ಏಕೆಂದರೆ, ಕಳೆದ ವರ್ಷ ಹನಿ ಹನಿ ನೀರಿಗೂ ರಾಜ್ಯ ರಾಜಧಾನಿ ಜನರು ಪರದಾಡಿದ್ದರು. ಎಷ್ಟೋ ಮಂದಿ ನೀರಿಲ್ಲದೆ ಬೆಂಗಳೂರನ್ನೇ ತೊರೆದಿದ್ದರು. ಕಾವೇರಿ ನೀರಿನಲ್ಲಿ ವಾಹನಗಳನ್ನು ಸ್ವಚ್ಛಗೊಳಿಸಿದ್ದಕ್ಕೆ ಬಿಬಿಎಂಪಿ ದಂಡ ವಿಧಿಸಿದ್ದನ್ನು ಮರೆಯುವಂತಿಲ್ಲ. ಒಂದು ಬಿಂದಿಗೆ ನೀರಿಗೂ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಕಳೆದ ಬೇಸಿಗೆಯಲ್ಲಿ ಎದುರಾಗಿತ್ತು. ಆದರೆ, ಈ ಬಾರಿ ವರುಣ ಕೃಪೆ ತೋರಿದ್ದು, ಕೆಆರ್​ಎಸ್​ ಡ್ಯಾಂಗೆ ಮತ್ತೆ ಜೀವಕಳೆ ಬಂದಿದೆ. ಅಲ್ಲದೆ, ರೈತರ ಮುಖದಲ್ಲೂ ಮಂದಹಾಸ ಮೂಡಿದೆ.

Advertisement

ಬರದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದ್ದಕ್ಕೆ ಕೆಲವು ತಿಂಗಳುಗಳು ಹಿಂದೆ ರೈತರು ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಯನ್ನು ನಡೆಸಿದ್ದರು. ಬೆಳೆಗೆ ನೀರಿಲ್ಲದೆ ಕಾವೇರಿ ಜಲಾನಯನ ಪ್ರದೇಶದ ರೈತರು ಮೋಡದ ಕಡೆ ಮುಖ ಮಾಡಿ ಯಾವಾಗ ಮಳೆ ಬರುತ್ತದೆ ಎಂದು ಎದುರು ನೋಡುತ್ತಿದ್ದರು. ಆದರೆ, ವರುಣ ತನ್ನ ಮುನಿಸನ್ನು ದೂರ ಮಾಡಿದ್ದು, ಮತ್ತೆ ಕೃಪೆ ತೋರಿದ್ದಾನೆ. ಭಾರಿ ಮಳೆಯಿಂದ ಕೆಆರ್​ಎಸ್​ ಡ್ಯಾಂ ತುಂಬಿದ್ದು ಜನರ ನೀರಿನ ಬವಣೆ ನೀಗಿದೆ.

KRS ಡ್ಯಾಂನ ಇಂದಿನ ನೀರಿನ‌ ಮಟ್ಟ
* ಗರಿಷ್ಠ ಮಟ್ಟ: 124.80 ಅಡಿ
* ಇಂದಿನ ಮಟ್ಟ: 124.10 ಅಡಿ
* ಗರಿಷ್ಠ ಸಾಂದ್ರತೆ: 49.453 ಟಿಎಂಸಿ
* ಇಂದಿನ ಸಾಂದ್ರತೆ: 48.475 ಟಿಎಂಸಿ
* ಒಳ ಹರಿವು ಪ್ರಮಾಣ: 31,852 ಕ್ಯೂಸೆಕ್
* ಹೊರ ಹರಿವು ಪ್ರಮಾಣ: 11,911 ಕ್ಯೂಸೆಕ್

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement