ಮಂಡ್ಯ: ಕಳೆದ 2 ದಿನಗಳ ಬಳಿಕ ವರುಣದೇವ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಪರಿಣಾಮ ಕಾವೇರಿ ಒಡಲಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದೆ. ಇದರಿಂದ ಕಾವೇರಿ ಕೊಳ್ಳದ ರೈತರಲ್ಲಿ , ಜನರಲ್ಲಿ ಸಂತಸ ಮನೆ ಮಾಡಿದೆ.
124.80 ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯ ಎರಡು ವರ್ಷಗಳ ಬಳಿಕ ಸಂಪೂರ್ಣವಾಗಿ ಭರ್ತಿಯಾಗಿದೆ. ಹೀಗಾಗಿ ಕಾವೇರಿ ಕೊಳ್ಳದ ಜನರಿಗೆ ಸಂತೋಷದ ಜೊತೆಗೆ ಪ್ರವಾಹದ ಭೀತಿ ಎದುರಾಗಿದೆ.
ಕೆಆರ್‌ಎಸ್ ಡ್ಯಾಂಗೆ 41,099 ಕ್ಯುಸೆಕ್ ಒಳಹರಿವು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇನ್ನೂ ಎರಡು ತಿಂಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚೆನ್ನಾಗಿ ಬೀಳುವ ಸಾಧ್ಯತೆ ಇದೆ. ಈ ಕಾರಣ ಡ್ಯಾಂಗೆ ಮತ್ತಷ್ಟು ಒಳಹರಿವು ಹೆಚ್ಚಾಗಲಿದ್ದು, ಅಷ್ಟೇ ಪ್ರಮಾಣದಲ್ಲಿ ಹೊರಹರಿವು ಬಿಡಲಾಗುತ್ತದೆ. ಹೀಗಾಗಿಯೇ ಮಂಡ್ಯ ಜಿಲ್ಲಾಡಳಿತ ಕಾವೇರಿ ನದಿ ಪಾತ್ರದ ಜನರಿಗೆ ಅಲರ್ಟ್ ಘೋಷಿಸಿದೆ.
				
															
                    
                    
                    
                    
                    
































