ಕಾರ್ಗಿಲ್ ವಿಜಯವು ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ತಿರುವು ತಂದುಕೊಟ್ಟ ಕ್ಷಣವಾಗಿದೆ. 1999ರ ಜುಲೈ 26 ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸ್ಮರಿಸುವ ದಿನ.
ಕಾರ್ಗಿಲ್, ಲಡಾಖ್ನಲ್ಲಿ ಈ ಹಿಂದೆ ಪಾಕಿಸ್ತಾನಿ ಪಡೆಗಳಿಂದ ವಶಪಡಿಸಿಕೊಂಡಿದ್ದ ಆಯಕಟ್ಟಿನ ಪ್ರಮುಖ ಪ್ರದೇಶವನ್ನು ಭಾರತೀಯ ಸೇನೆಯು ಪುನಃ ಪಡೆದುಕೊಂಡ ದಿನ. ಈ ದಿನವು ದೇಶದ ಸಾರ್ವಭೌಮತ್ವವನ್ನು ಶೌರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು, ಅವರ ಬಲಿದಾನವನ್ನು ಕೊಂಡಾಡುವ, ಭಾರತೀಯರೆಲ್ಲರೂ ಹೆಮ್ಮೆಯಿಂದ ಸ್ಮರಿಸುವ ದಿನ. ಪಾಕ್ ಹಾಗೂ ಭಾರತ ದೇಶಗಳ ಗಡಿಯಲ್ಲಿ ಯಾವುದೇ ಶಸ್ತಾಸ್ತ್ರ ಯುದ್ಧ ನಡೆಯದಂತೆ ಶಿಮ್ಲಾ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿತ್ತು.
ಆದರೆ ಈ ಯುದ್ಧ ನಡೆಯಲು ಮುಖ್ಯ ಕಾರಣ ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳ ಒಳನುಸುಳುವಿಕೆಯಾಗಿತ್ತು. ಈ ವಿಚಾರವು ಗಮನಕ್ಕೆ ಬರುತ್ತಿದ್ದಂತೆ ಭಾರತ ಸರ್ಕಾರವು ಆಪರೇಷನ್ ವಿಜಯ್ ವನ್ನು ಪ್ರಾರಂಭಿಸಿತು. ಇದಕ್ಕೆ ಪ್ರತ್ಯುತ್ತರ ನೀಡುವ ಸಲುವಾಗಿ 20,000 ಭಾರತೀಯ ಸೈನಿಕರನ್ನು ನಿಯೋಜಿಸಿ, ಪಾಕಿಸ್ತಾನಿ ಸೈನಿಕರನ್ನು ತನ್ನ ಭೂಪ್ರದೇಶದಿಂದ ಹೊರಹಾಕುವಲ್ಲಿ ಕೊನೆಗೂ ಯಶಸ್ವಿಯಾಯಿತು. ಆದರೆ 60 ದಿನಗಳಿಗಿಂತ ಹೆಚ್ಚು ಕಾಲ ನಡೆದ ಈ ಯುದ್ಧದಲ್ಲಿ 527 ಭಾರತೀಯ ಸೈನಿಕರು ದೇಶಕ್ಕಾಗಿ ಪ್ರಾಣ ಅರ್ಪಿಸಿದರು. ಜುಲೈ 26 ರಂದು ಈ ಯುದ್ಧವು ಕೊನೆಗೊಂಡಿತು.