ಹೈದರಾಬಾದ್: ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ಮಳೆ ಅನಾಹುತ ಸೃಷ್ಟಿಸಿದೆ. ಅದರಲ್ಲೂ ಶನಿವಾರ ಸುರಿದ ಭಾರಿ ಮಳೆಗೆ ದೆಹಲಿಯ ರಾಜೇಂದ್ರ ನಗರದಲ್ಲಿರುವ ರಾವುಸ್ ಐಎಎಸ್ ಸ್ಟಡಿ ಸರ್ಕಲ್ ಕೇಂದ್ರದ ಬೇಸ್‌ಮೆಂಟ್‌ಗೆ ನೀರು ನುಗ್ಗಿದ ಪರಿಣಾಮ, ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಭಾನುವಾರ ಮುಂಜಾನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಶ್ರೀರಾಂಪುರ ಮೂಲದ ತಾನಿಯಾ ಸೋನಿ, ಉತ್ತರ ಪ್ರದೇಶದ ಶ್ರೇಯಾ ಯಾದವ್ (22) ಮತ್ತು ಕೇರಳದ ನೆವಿನ್ ದಲಿವಾನ್ (29) ಮೃತದೇಹಗಳನ್ನು ಹೊರತೆಗೆಯಲಾಯಿತು. ಈ ದುರಂತದಲ್ಲಿ ಮೃತಪಟ್ಟ ತಾನಿಯಾ ಸೋನಿ ಅವರ ತಂದೆ ವಿಜಯಕುಮಾರ್ ಸಿಂಗರೇಣಿ ಬಿಹಾರದ ಔರಂಗಾಬಾದ್ ಮೂಲದರು. ಅವರು ಶ್ರೀರಾಂಪುರ ವಿಭಾಗದಲ್ಲಿ ಎಸ್ಆರ್ಪಿ-1 ಗಣಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಿಸಿಸಿ ಟೌನ್‌ಶಿಪ್ ಬಿ-2 ಕಂಪನಿ ಕ್ವಾರ್ಟರ್, ನಸ್ಪುರ್‌ನಲ್ಲಿ ವಾಸಿಸುತ್ತಿದ್ದಾರೆ. ವಿಜಯಕುಮಾರ್ ಮತ್ತು ಬಬಿತಾ ದಂಪತಿಗೆ ಮೂವರು ಮಕ್ಕಳಿದ್ದು, ಸೋನಿ ಹಿರಿಯ ಮಗಳು.
ಎರಡನೇ ಮಗಳು ಪಾಲ್ಖ್ ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಟೆಕ್ ಓದುತ್ತಿದ್ದಾಳೆ. ಪುತ್ರ ಆದಿತ್ಯಕುಮಾರ್ ಹೈದರಾಬಾದ್ನಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಸೋನಿ ಕಳೆದ ವರ್ಷ ದೆಹಲಿಯ ಮಹಾರಾಜ ಅಗ್ರಸೇನ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದರು. ಕಲೆಕ್ಟರ್ ಆಗುವ ಆಸೆಯನ್ನು ತಂದೆಗೆ ತಿಳಿಸಿದ್ದಳು. ತಂದೆಯ ಆಶಯವೂ ಅದೇ ಆಗಿದ್ದರಿಂದ ಮೂರು ತಿಂಗಳ ಹಿಂದೆ ರಾವ್ ಐಎಎಸ್ ಸ್ಟಡಿ ಸರ್ಕಲ್ ಕೋಚಿಂಗ್ ಸೆಂಟರ್ಗೆ ಸೇರಿಸಿದ್ದರು. ಆದರೆ ವಿಧಿಯ ಆಟಕ್ಕೆ ತಾನಿಯಾ ಸೋನಿ ಬಲಿಯಾಗಿದ್ದಾರೆ. ಈ ಘಟನೆಯ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ.
































