ನ್ಯಾಯಾಧೀಶರ ಹೆಸರಿನಲ್ಲಿ‌ ನಕಲಿ ನೇಮಕಾತಿ ಪತ್ರ ನೀಡಿ 49 ಲಕ್ಷ ರೂ ವಂಚನೆ

ಬೆಂಗಳೂರು: ನ್ಯಾಯಾಧೀಶರು ನಮಗೆ ಪರಿಚಯವಿದ್ದು, ನೇರನೇಮಕಾತಿ ಮೂಲಕ ಕೋರ್ಟ್‌ನಲ್ಲಿ ಕೆಳ ಹಂತದ ಹುದ್ದೆ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ 49 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದಡಿ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರ್.ಟಿ.ನಗರ ನಿವಾಸಿ ಅಬ್ದುಲ್ ರಜಾಕ್ ಎಂಬುವರು ನೀಡಿದ ದೂರಿನ ಮೇರೆಗೆ ಕೊಪ್ಪಳ ಮೂಲದ ಸಿದ್ದಲಿಂಗಯ್ಯ ಹಿರೇಮಠ್ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ 15 ವರ್ಷಗಳಿಂದ ನೆಲೆಸಿರುವ ದೂರುದಾರ ಅಬ್ದುಲ್, ನಾಗರಭಾವಿಯ ಪಾಪರೆಡ್ಡಿಪಾಳ್ಯದಲ್ಲಿ ಗೋಲ್ಡನ್ ಹ್ಯಾಂಡ್ಸ್ ಹೆಸರಿನಲ್ಲಿ ಲೇಡಿಸ್ ಪಿ.ಜಿ.ನಡೆಸುತ್ತಿದ್ದಾರೆ. ಇದೇ ಹೆಸರಿನಲ್ಲಿ ಸ್ವಯಂಸೇವಾ ಸಂಸ್ಥೆ (ಎನ್ ಜಿಓ) ನಡೆಸುತ್ತಿದ್ದಾರೆ. 2023ರಲ್ಲಿ ರಜಾಕ್ ಗೆ ಆರೋಪಿ ಸಿದ್ದಲಿಂಗಯ್ಯ ಪರಿಚಯಿಸಿಕೊಂಡಿದ್ದ. ಚಿಕ್ಕಬಳ್ಳಾಪುರದ ಕೆರೆಯೊಂದರಲ್ಲಿ ಹೂಳು ತೆಗೆಯುವ ಕೆಲಸ ಕೊಡಿಸುವುದಾಗಿ ಆರೋಪಿ ನಂಬಿಸಿದ್ದ. ಇದಾದ ಒಂದು ತಿಂಗಳ ಬಳಿಕ ಸಹಕಾರನಗರದಲ್ಲಿರುವ ಆತನ ಕಚೇರಿಗೆ ತೆರಳಿದ್ದಾಗ ಸರ್ಕಾರದ ಬಳಿ ಹಣವಿಲ್ಲ. ಅನುದಾನ ನೀಡಿದ ಬಳಿಕ ಕೆಲಸ ಕೊಡಿಸುವುದಾಗಿ ಹೇಳಿದ್ದ. ತನಗೆ ನ್ಯಾಯಾಧೀಶರು ಪರಿಚಯವಿದ್ದು, ಪ್ರೊಸೆಸ್ ಸರ್ವರ್ ಹಾಗೂ ಗುಮಾಸ್ತ ಹುದ್ದೆ ಕೊಡಿಸುವುದಾಗಿ ಹೇಳಿದ್ದ. ಇದನ್ನ ನಂಬದ ದೂರುದಾರ, ಸರ್ಕಾರಿ ಹುದ್ದೆಗಳು ಆನ್ ಲೈನ್ ಮೂಲಕ ಪ್ರಕ್ರಿಯೆ ಆಗಲಿದ್ದು, ಹೇಗೆ ಕೆಲಸ ಕೊಡಿಸುತ್ತೀರಾ ಎಂದು ಆರೋಪಿಯನ್ನ ಪ್ರಶ್ನಿಸಿದ್ದರು. ನ್ಯಾಯಾಧೀಶರು ತಮಗೆ ಪರಿಚಯವಿರುವುದರಿಂದ ನೇರ ನೇಮಕಾತಿ ಮೂಲಕ ಕೆಲಸ ಕೊಡಿಸುವೆ ಇದಕ್ಕೆ ಒಬ್ಬರಿಗೆ 7 ಲಕ್ಷವಾಗಲಿದೆ ಆರೋಪಿ ಹೇಳಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಒಂದೇ ಹುದ್ದೆಗೆ 7 ಲಕ್ಷ ಬೇಡಿಕೆ ದೂರುದಾರನ ಚಿಕ್ಕಪ್ಪನಿಗೆ ಮಗ ಜಾವೀದ್ ಎಂಬುವರಿಗೆ ಕೆಲಸ ಕೊಡಿಸುವಂತೆ ಆರೋಪಿಯೊಂದಿಗೆ ಮಾತನಾಡಿದ್ದರು. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದ ಜಾವೀದ್ ಸರ್ವರ್ ಹುದ್ದೆ ಕೊಡಿಸುವುದಾಗಿ ಹೇಳಿ ಹಂತ-ಹಂತವಾಗಿ 7 ಲಕ್ಷ ಹಣ ಪಡೆದಿದ್ದ. 2023ರಂದು ಮಾರ್ಚ್ ತಿಂಗಳಲ್ಲಿ ಸಿಟಿ ಸಿವಿಲ್ ಕೋರ್ಟ್ ಬಳಿ ಜಾವೀದ್ ನನ್ನ ಕರೆಯಿಸಿಕೊಂಡು ಸಹಿ ಪಡೆದು ಕೆಲಸವಾಗಿದೆ ಎಂದು ಹೇಳಿ ಹೈಕೋರ್ಟ್ ನ್ಯಾಯಾಧೀಶರ ಹೆಸರಿನ ಸಹಿಯುಳ್ಳ ನೇಮಕಾತಿ ಪತ್ರ ನೀಡಿದ್ದ. ಇದೇ ರೀತಿ ಆರು ಜನರಿಂದ ತಲಾ 7 ಲಕ್ಷ ಸೇರಿ ಒಟ್ಟು 49 ಲಕ್ಷ ಪಡೆದು ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿರುವುದಾಗಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಾವೀದ್ ಹೊರತುಪಡಿಸಿದ ಉಳಿದ ಆರು ಮಂದಿಯಿಂದ ಹಣ ಪಡೆದಿದ್ದ ಆರೋಪಿ ಎಲ್ಲರಿಗೂ ರಿಜಿಸ್ಟ್ರಾರ್ ಜನರಲ್ ಮುರುಳೀಧರ ಪೈ ಎಂಬುವರ ಸಹಿವಿರುವ ನೇಮಕಾತಿ ಪತ್ರ ನೀಡಿ ಕಲಬುರಗಿ ಕೋರ್ಟ್ ಗೆ ಹೋಗಿ ತೋರಿಸುವಂತೆ ಸೂಚಿಸಿದ್ದ. ಇದರಂತೆ ನ್ಯಾಯಾಲಯಕ್ಕೆ ತೆರಳಿ ಸಂಬಂಧಪಟ್ಟವರಿಗೆ ತೋರಿಸಿದಾಗ ನೀಡಲಾಗಿರುವ ಪತ್ರಕ್ಕೆ ಮಾನ್ಯತೆವಿಲ್ಲ ಎಂದು ಹೇಳಿ ಕಳುಹಿಸಿದ್ದರು. ಈ ಬಗ್ಗೆ ಆರೋಪಿಯನ್ನ ಪ್ರಶ್ನಿಸಿದಾಗ ಪತ್ರದಲ್ಲಿ ತಾಂತ್ರಿಕ ದೋಷವಾಗಿದ್ದು, ಸರಿಪಡಿಸಿ ಮತ್ತೆ ಉದ್ಯೋಗ ಪತ್ರ ನೀಡುವುದಾಗಿ ಹೇಳಿದ್ದ. ಕಾಲಕ್ರಮೇಣ ವಿವಿಧ ಕಾರಣಗಳನ್ನ ಹೇಳಿ ಮುಂದೂಡುತ್ತಿದ್ದ. ಈ ಬಗ್ಗೆ ಅನುಮಾನ ಬಂದು ಹಣ ನೀಡುವಂತೆ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಬ್ದುಲ್ ರಜಾಕ್ ದೂರಿನಲ್ಲಿ ವಿವರಿಸಿದ್ದಾರೆ. ವಂಚನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದ್ದು ಬಂಧಿಸಿ ವಿಚಾರಣೆ ನಡೆಸಿದಾಗ ಎಷ್ಟು ಮಂದಿಗೆ ವಂಚಿಸಿರುವ ಬಗ್ಗೆ ತಿಳಿಯಲಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement