ವಾಷಿಂಗ್ಟನ್: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಪಲಾಯನಗೊಂಡು ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಶೇಕ್ ಹಸೀನಾ ಅವರಿಗೆ ಅಮೆರಿಕ ಬಿಗ್ ಶಾಕ್ ನೀಡಿದೆ.
ಹೌದು. ಶೇಕ್ ಹಸೀನಾ ಅವರು ಕೆಲಕಾಲ ಇಂಗ್ಲೆಂಡ್ನಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಆದರೆ, ಅವರಿಗೆ ಅಲ್ಲಿಗೆ ತೆರಳಲು ಇನ್ನೂ ಅನುಮತಿ ಸಿಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ಭಾರತದ ದೆಹಲಿಯಲ್ಲಿ ಸುರಕ್ಷಿತ ಸ್ಥಳದಲ್ಲಿದ್ದಾರೆ. ಮೂಲಗಳ ಪ್ರಕಾರ ಯುಕೆ (ಇಂಗ್ಲೆಂಡ್) ಆಕೆಗೆ ಆಶ್ರಯ ನೀಡಲು ಸಿದ್ಧವಾಗಿಲ್ಲ. ಹೀಗಾಗಿ, ಶೇಖ್ ಹಸೀನಾ ಅವರ ಪರಿಸ್ಥಿತಿ ಅತಂತ್ರವಾಗಿದೆ. ಇನ್ನೊಂದೆಡೆ ಅಮೆರಿಕ ಶೇಖ್ ಹಸೀನಾ ಅವರ ವೀಸಾವನ್ನು ರದ್ದುಗೊಳಿಸುವ ಮೂಲಕ ಆಘಾತ ನೀಡಿದೆ ಎಂದು ವರದಿಯಾಗಿದೆ.
“ವೀಸಾ ದಾಖಲೆಗಳು ಯುಎಸ್ ಕಾನೂನಿನ ಅಡಿಯಲ್ಲಿ ಗೌಪ್ಯವಾಗಿರುತ್ತವೆ. ಆದ್ದರಿಂದ, ನಾವು ವೈಯಕ್ತಿಕ ವೀಸಾ ಪ್ರಕರಣಗಳ ವಿವರಗಳನ್ನು ಚರ್ಚಿಸುವುದಿಲ್ಲ” ಎಂದು ಢಾಕಾದಲ್ಲಿನ ಯುಎಸ್ ರಾಯಭಾರ ಕಚೇರಿಯ ವಕ್ತಾರರು ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಯುನೈಟೆಡ್ ನ್ಯೂಸ್ ಆಫ್ ಬಾಂಗ್ಲಾದೇಶ ವರದಿ ಮಾಡಿದೆ. ಮಾಹಿತಿಗಳ ಪ್ರಕಾರ ಶೇಖ್ ಹಸೀನಾ ಅವರಿಗೆ ಮಾತ್ರವಲ್ಲದೆ ಅವರ ಪಕ್ಷದ ಸದಸ್ಯರು ಮತ್ತು ಅಧಿಕಾರಿಗಳಿಗೆ ಕೂಡ ಅಮೆರಿಕಾ ವೀಸಾ ನಿರ್ಬಂಧಗಳನ್ನು ವಿಧಿಸಿದೆ.