ರಾಜ್ಯಪಾಲರ ವಜಾಕ್ಕೆ ಈಶ್ವರ ಖಂಡ್ರೆ ಒತ್ತಾಯ

WhatsApp
Telegram
Facebook
Twitter
LinkedIn

ಬೆಂಗಳೂರು: ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಇವರನ್ನು ರಾಷ್ಟ್ರಪತಿಗಳು ತಕ್ಷಣವೇ ವಜಾ ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಜಕೀಯ ಪ್ರೇರಿತವಾಗಿ ಮಾಡಿರುವ ಆರೋಪವನ್ನೇ ಆಧಾರವಾಗಿಟ್ಟುಕೊಂಡು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸರಿಯಲ್ಲ. ರಾಜ್ಯಪಾಲರು ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ರಾಜಕೀಯ ದ್ವೇಷ ಮತ್ತು ಒತ್ತಡಕ್ಕೆ ಮಣಿದು ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಪಕ್ಷ ಇದರ ವಿರುದ್ಧ ರಾಜಕೀಯ ಹೋರಾಟ ಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿ, ಚುನಾಯಿತ ಸರ್ಕಾರಗಳನ್ನು ಬೀಳಿಸುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಎರಡು ಬಾರಿ ವಾಮ ಮಾರ್ಗದಿಂದ ಆಡಳಿತಕ್ಕೆ ಬಂದ ಬಿಜೆಪಿ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಖಂಡ್ರೆ ಹೇಳಿದ್ದಾರೆ.

ಜನಪರವಾದ ಆಡಳಿತ ನೀಡುತ್ತಾ, ಸಾಮಾಜಿಕ ನ್ಯಾಯಕ್ಕೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಕುಗ್ಗಿಸಲು ಮತ್ತು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯಪಾಲರ ಮೂಲಕ ಷಡ್ಯಂತ್ರ ರೂಪಿಸಿದ್ದಾರೆ. ಇತ್ತೀಚೆಗೆ ದೆಹಲಿಗೆ ರಾಜ್ಯಪಾಲರನ್ನು ಕರೆಸಿಕೊಂಡು ಅವರಿಗೆ ಸ್ಪಷ್ಟ ಸೂಚನೆ ನೀಡಿ ಕಳಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.

ರಾಜ್ಯದ ಜನತೆ ಇದನ್ನು ಕ್ಷಮಿಸುವುದಿಲ್ಲ ಕಾಂಗ್ರೆಸ್ ಪಕ್ಷ ರಾಜ್ಯಪಾಲರ ಪಕ್ಷಪಾತ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಿದೆ. ಜನರ ಬೆಂಬಲ ಸರ್ಕಾರದ ಪರವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ರಾಜ್ಯಪಾಲರ ಮುಂದೆ ಹಿಂದಿನ ಸರ್ಕಾರದ ಹಲವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಕೋರಿ ಸಲ್ಲಿಸಿರುವ ಅರ್ಜಿಗಳು ಬಾಕಿ ಇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ತರಾತುರಿಯಿಂದ ಕ್ರಮ ಕೈಗೊಳ್ಳಲಾಗಿದೆ ಇದು ರಾಜಕೀಯ ಪ್ರೇರಿತ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರು ಅನುಸರಿಸಿರುವ ಪಕ್ಷಪಾತ ಧೋರಣೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲವೇ ಇವರನ್ನು ರಾಷ್ಟ್ರಪತಿಗಳು ವಜಾ ಮಾಡಬೇಕು ಎಂದು ಖಂಡ್ರೆ ಒತ್ತಾಯಿಸಿದ್ದಾರೆ

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon