ಮುಂಬೈ : ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದುಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಮೆಯ ವಿನ್ಯಾಸಗಾರ ಚೇತನ್ ಪಾಟೀಲ್ ಅವರನ್ನು ಬಂಧಿಸಲಾಗಿದೆ.
ಶಿವಾಜಿ ಪ್ರತಿಮೆ ಕುಸಿದುಬಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರತಿಮೆ ನಿರ್ಮಾಣದ ಗುತ್ತಿಗೆದಾರ ಹಾಗೂ ವಿನ್ಯಾಸಗಾರ ಚೇತನ್ ಪಾಟೀಲ್ ವಿರುದ್ಧ ಮಂಗಳವಾರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದರಂತೆ ಚೇತನ್ ಪಾಟೀಲ್ ಅವರನ್ನು ಕೊಲ್ಲಾಪುರದಲ್ಲಿ ಗುರುವಾರ ತಡರಾತ್ರಿ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆಗಾಗಿ ಸಿಂಧುದುರ್ಗ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಕೊಲ್ಲಾಪುರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ದುರ್ಘಟನೆಗೆ ಪ್ರತಿಮೆ ನಿರ್ಮಾಣದ ಗುತ್ತಿಗೆದಾರ ಹಾಗೂ ವಿನ್ಯಾಸಗಾರ ಚೇತನ್ ಪಾಟೀಲ್ ಕಾರಣವೆಂದು ಆರೋಪಿಸಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಒಬ್ಬರು ಸೋಮವಾರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಗುತ್ತಿಗೆದಾರ ಜಯದೀಪ್ ಆಷ್ಟೆ ಹಾಗೂ ಚೇತನ್ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದರು.
35 ಅಡಿ ಎತ್ತರದ ಶಿವಾಜಿ ಮಹಾರಾಜರ ಈ ಪ್ರತಿಮೆಯನ್ನು 2023ರ ಡಿಸೆಂಬರ್ 4ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. ಇದೇ ಆಗಸ್ಟ್ 26ರಂದು ಈ ಪ್ರತಿಮೆ ಕುಸಿದಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸಿದ್ದವು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.