“ಮುಡಾ ವಶಪಡಿಸಿಕೊಂಡಿರುವ ಭೂಮಿ ಮತ್ತೆ ಕೃಷಿ ಭೂಮಿಯಾಗಿದ್ದು ಮ್ಯಾಜಿಕ್‌!” – ಮಣಿಂದರ್ ಸಿಂಗ್‌ ವಾದ

WhatsApp
Telegram
Facebook
Twitter
LinkedIn

ಬೆಂಗಳೂರು: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಹೈಕೋರ್ಟ್​ ಏಕಸದಸ್ಯ ಪೀಠದಲ್ಲಿ ವಾದ, ಪ್ರತಿವಾದ ಆಲಿಸಿದ ಬಳಿಕ ಸೆಪ್ಟೆಂಬರ್​​ 2ಕ್ಕೆ ಮುಂದೂಡಲಾಗಿದೆ. ದೂರುದಾರ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣೀಂದರ್ ಸಿಂಗ್ ವಾದ ಮಂಡಿಸಿದ್ದಾರೆ. “ಮುಡಾ ಅಭಿವೃದ್ಧಿಪಡಿಸಲು ವಶಪಡಿಸಿಕೊಂಡಿರುವ ಭೂಮಿಯು ಮತ್ತೆ ಕೃಷಿ ಭೂಮಿಯಾಗಿರುವುದೇ ಮ್ಯಾಜಿಕ್‌” ಎಂದು ಹಿರಿಯ ವಕೀಲ ಮಣಿಂದರ್ ಸಿಂಗ್‌ ಕಿಚಾಯಿಸಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾವರ್ತಿ ಅವರದು ಎನ್ನಲಾಗುತ್ತಿರುವ ಆಕ್ಷೇಪಾರ್ಹವಾದ 3.16 ಎಕರೆ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು 1992ರಲ್ಲಿ ಮುಡಾ ಆರಂಭಿಸಿತ್ತು. ಆನಂತರ ಮುಡಾ ಭೂಮಿ ವಶಪಡಿಸಿಕೊಂಡಿತ್ತು. 1998ರ ಕಂದಾಯ ದಾಖಲೆಗಳ ಪ್ರಕಾರ ಆಕ್ಷೇಪಾರ್ಹವಾದ ಭೂ ಮಾಲೀಕತ್ವ ಮುಡಾ ಹೆಸರಿನಲ್ಲಿದೆ.

ಸೆಕ್ಷನ್‌ 48ರ ಅಡಿ ಆಕ್ಷೇಪಾರ್ಹವಾದ ಭೂಮಿಯನ್ನು ಬಿಡುಗಡೆ ಮಾಡಿರುವುದು ಬೃಹತ್‌ ಪ್ರಮಾಣದ ವಂಚನೆಯ ಪ್ರಕರಣವಾಗಿದೆ. ನಮಗೆ ತಿಳಿದಿರುವ ಪ್ರಕಾರ ಒಮ್ಮೆ ಸರ್ಕಾರದ ಭೂಮಿ ಎಂದು ಕಂದಾಯ ದಾಖಲೆಗಳಲ್ಲಿ ನಮೂದಾದರೆ ಪರಿಹಾರ ಪಡೆಯುವುದಕ್ಕೆ ಹೊರತುಪಡಿಸಿ, ಆನಂತರ ನಡೆಯುವ ಯಾವುದೇ ವರ್ಗಾವಣೆಯು ಅಕ್ರಮವಾಗುತ್ತದೆ. ಆಕ್ಷೇಪಾರ್ಹವಾದ ಭೂಮಿಯು ಮುಡಾ ಮಾಲೀಕತ್ವಕ್ಕೆ ಒಳಪಟ್ಟಿದೆ ಎಂದು ದಾಖಲಾಗಿದ್ದು, ಆನಂತರ ಬಿಡುಗಡೆ ಅಧಿಸೂಚನೆಯಾಗಿದೆ. 2001ರಿಂದ 2004ರವರೆಗೆ ಅಭಿವೃದ್ಧಿ ಯೋಜನೆಯಡಿ ಅದನ್ನು ಅಭಿವೃದ್ಧಿಪಡಿಸಲಾಗಿತ್ತು. ನಿವೇಶನ ಮಾಡಿ ಕ್ರಯ ಪತ್ರ ನೀಡಲಾಗಿತ್ತು” ಎಂದರು. ಆಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು ʼಅದೇ ಭೂಮಿಗೆ ಸಂಬಂಧಿಸಿದ್ದಾ?ʼ ಎಂದರು.

ಇದಕ್ಕೆ ಮಣಿಂದರ್‌ ಸಿಂಗ್‌ “ಹೌದು” ಎಂದು ಉತ್ತರಿಸಿದರು. “ಆನಂತರ ಆಕ್ಷೇಪಾರ್ಹವಾದ ಭೂಮಿಯನ್ನು ಮುಖ್ಯಮಂತ್ರಿ ಪತ್ನಿ ಪಾರ್ವತಿ ಅವರಿಗೆ ವರ್ಗಾವಣೆ ಮಾಡಲು ಅಡಿಪಾಯ ಹಾಕಲಾಗಿದೆ. ಕಾನೂನಿನಲ್ಲಿ ನಿರ್ಬಂಧ ಇದ್ದು, ಅಕ್ರಮವಾಗಿ ಬಿಡುಗಡೆ ಮಾಡಿರುವುದನ್ನು ಅರ್ಜಿದಾರರು ಹೇಗಾದರೂ ಸಮರ್ಥಿಸಿಕೊಳ್ಳಬೇಕಿದೆ. ಯಾರೋ ಅಧಿಕಾರಿ ನೋಟ್‌ ಸಿದ್ಧಪಡಿಸಿ, ರಿಟ್‌ ಅರ್ಜಿಯ ಸಂಖ್ಯೆ ಉಲ್ಲೇಖಿಸಿದ್ದಾರೆ. ಅಲ್ಲಿ ಒಂದು ಪುಟದ ಆದೇಶ ತೋರಿಸಲಾಗಿದೆ. ಅಡ್ವೊಕೇಟ್‌ ಜನರಲ್‌ ಅಭಿಪ್ರಾಯದಲ್ಲಿ ಹೈಕೋರ್ಟ್‌ ಆದೇಶ ಉಲ್ಲೇಖಿಸಲಾಗಿದೆ” ಎಂದು ಅಕ್ರಮದತ್ತ ಬೆರಳು ಮಾಡಿದರು. “ಅಭಿಯೋಜನಾ ಮಂಜೂರಾತಿ ನೀಡಲು ರಾಜ್ಯಪಾಲರು ತಮ್ಮ ವಿವೇಚನೆ ಬಳಸಿದ್ದರಿಂದ ಅವರ ಮೇಲೆ ಒತ್ತಡ ತರಲು ಸಂಪುಟವು ನಿರ್ಣಯ ಅಂಗೀಕರಿಸಿದೆ. ಸಂಪುಟ ಸಭೆಯ ವಿವರ, ಸಿದ್ದರಾಮಯ್ಯ ಅವರ ಅರ್ಜಿ ಒಂದೇ ರೀತಿಯಲ್ಲಿವೆ” ಎಂದು ಆಕ್ಷೇಪಿಸಿದರು. ಈ ಮಧ್ಯೆ, ನ್ಯಾ. ನಾಗಪ್ರಸನ್ನ ಅವರು “ವಶಪಡಿಸಿಕೊಳ್ಳಲಾದ ಭೂಮಿ ಮತ್ತೆ ಹೇಗೆ ಕೃಷಿ ಭೂಮಿ ಆಯಿತು” ಎಂದರು.

ಅದಕ್ಕೆ ಸಿಂಗ್‌ ಅವರು “ಅದು ಮ್ಯಾಜಿಕ್‌” ಎಂದು ಅಧಿಕಾರಿಗಳ ಕರಾಮತ್ತಿನ ಬಗ್ಗೆ ಕಿಚಾಯಿಸಿದರು. ಮುಂದುವರಿದು, “ತನಿಖೆಗೆ ಇದು ಸೂಕ್ತವಾದ ಪ್ರಕರಣ. ಸರ್ಕಾರದ ಎಲ್ಲಾ ವಿಭಾಗಗಳು ಒಂದೇ ರೀತಿಯ ಪ್ರತಿಕ್ರಿಯೆ ಸಲ್ಲಿಸಿದರೆ ರಾಜ್ಯ ಸರ್ಕಾರದ ಅಂಗ ಸಂಸ್ಥೆ ಹೇಗೆ ತನಿಖೆ ನಡೆಸುತ್ತದೆ? ಭೂಮಿಯ ಡಿನೋಟಿಫಿಕೇಶನ್‌ ಒಪ್ಪಬೇಕೆ ಅಥವಾ ಬೇಡವೇ ಎಂಬ ವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ಧರಿಸಬೇಕಿದೆ. ಇದೇ ತನಿಖೆಯ ವಸ್ತುವಾಗಿರಲಿದೆ. ಸೆಕ್ಷನ್‌ 48ರ ಅಡಿ ಭೂಮಿ ಬಿಡುಗಡೆ ಮಾಡಿರುವುದನ್ನು ನಾನು ಸಮರ್ಥಿಸುತ್ತಿಲ್ಲ. ಅದು ಅಸಾಧ್ಯ ಎಂಬುದನ್ನು ತೋರ್ಪಡಿಸುತ್ತಿದ್ದೇನೆ. ಇಲ್ಲಿ ಕೈಚಳಕ ನಡೆದಿರುವುದು ಸ್ಪಷ್ಟವಾಗಿದೆ” ಎಂದರು. ಸುಬ್ರಹ್ಮಣ್ಯ ಸ್ವಾಮಿ ತೀರ್ಪು ಉಲ್ಲೇಖಿಸಿ ಸಿಂಗ್‌ ವಾದ ಪೂರ್ಣಗೊಳಿಸಿದರು. ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಪಿ ಎಸ್‌ ಪ್ರದೀಪ್‌ ಕುಮಾರ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ತಮಗಿರುವ ಆಸಕ್ತಿಯ ಕಾರಣಕ್ಕೆ ಸಂಪುಟದ ಸಚಿವರು ಪ್ರಕರಣದಲ್ಲಿ ಪಕ್ಷಪಾತಿಗಳಾಗುವ ಸಾಧ್ಯತೆಯಿಂದಾಗಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರದಿಂದ ವಂಚಿತರಾಗುತ್ತಾರೆ. ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನುಸಾರ ಕರ್ತವ್ಯವನ್ನು ನಿರ್ವಹಿಸುವುದು ಮಾತ್ರವೇ ಅಲ್ಲದೆ ಸಂವಿಧಾನದ ರಕ್ಷಕರಾಗಿಯೂ ತಮ್ಮ ಕಚೇರಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ” ಎಂದು ಎಸ್‌ ಆರ್‌ ಬೊಮ್ಮಾಯಿ ಪ್ರಕರಣ ಉಲ್ಲೇಖಿಸಿದರು.

ಮುಡಾ ಅಕ್ರಮ ತನಿಖೆಗಾಗಿ ಏಕಸದಸ್ಯ ಆಯೋಗ ಮತ್ತು ತನಿಖಾ ತಂಡ ನೇಮಿಸಿರುವ ಸರ್ಕಾರದ ಆದೇಶಗಳನ್ನು ನಾವದಗಿ ನ್ಯಾಯಾಲಯದ ಗಮನಕ್ಕೆ ತಂದರು. ಈ ಆದೇಶಗಳಲ್ಲಿ ಮೇಲ್ನೋಟಕ್ಕೆ ಅಕ್ರಮವನ್ನು ಪರಿಗಣಿಸಲಾಗಿದೆ ಎನ್ನುವ ಅಂಶ ಇರುವುದನ್ನು ಉಲ್ಲೇಖಿಸಿದರು. “ರಾಜ್ಯಪಾಲರು ಕಾರ್ಯವಿಧಾನ ಅನುಸರಿಸಿಲ್ಲ ಎನ್ನುವುದು ಬೇರೆ; ಆದರೆ, ವಿವೇಚನೆ ಬಳಸಿಲ್ಲ ಎನ್ನಲಾಗದು. ತನಿಖೆಗೆ ನೇಮಿಸಿರುವ ಸರ್ಕಾರದ ಆದೇಶಗಳನ್ನು ರಾಜ್ಯಪಾಲರು ಗಮನಿಸಿದ್ದಾರೆ, ಹಾಗಾಗಿ ಅವರು ವಿವೇಚನೆ ಬಳಸಿಲ್ಲ ಎನ್ನಲಾಗದು” ಎಂದು ವಾದಿಸಿದರು. ಮೂರನೇ ಪ್ರತಿವಾದಿ ಟಿ ಜೆ ಅಬ್ರಹಾಂ ಪರವಾಗಿ ವಕೀಲ ರಂಗನಾಥ್‌ ರೆಡ್ಡಿ ಅವರು ವಾದ ಮಂಡಿಸಿದರು. ರಾಜ್ಯಪಾಲರ ಅನುಮತಿ ಪಡೆಯುವುದಕ್ಕೂ ಮುನ್ನವೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ. ಆಕ್ಷೇಪಿತ ಭೂಮಿಯನ್ನು ಮುಖ್ಯಮಂತ್ರಿಯವರ ಭಾವಮೈದುನನಿಗೆ ಮಾರಾಟ ಮಾಡಿದ ದಿನ ಆ ಜಾಗದಲ್ಲಿ ಕೆಸರೆ ಗ್ರಾಮ ಎಂಬುದು ಅಸ್ತಿತ್ವದಲ್ಲಿಯೇ ಇರಲಿಲ್ಲ.

ಅಸ್ತಿತ್ವದಲ್ಲಿಲ್ಲದ ಗ್ರಾಮದ, ಅಸ್ತಿತ್ವದಲ್ಲಿಲ್ಲದ ಜಾಗವನ್ನು ಮಾರಾಟ ಮಾಡಲಾಗಿದೆ. ಹೀಗೆ ಪಡೆದ ಅಸ್ತಿತ್ವದಲ್ಲಿಲ್ಲದ ಕೃಷಿ ಭೂಮಿಯ ಪರಿವರ್ತನೆಯನ್ನು ಕೋರಿ ಮಲ್ಲಿಕಾರ್ಜುನ ಸ್ವಾಮಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ವಾದಿಸಿದರು. ಮುಂದುವರಿದು, ತಮ್ಮ ವಾದದ ವೇಳೆ ಅವರು, ಇಂತಹ ಅಸ್ತಿತ್ವದಲ್ಲಿದ್ದ ಭೂಮಿಯ ಮರುಪರಿವರ್ತನೆಗೆ ಅಂದಿನ ಜಿಲ್ಲಾಧಿಕಾರಿಯವರು, ಕಂದಾಯ ಅಧಿಕಾರಿಗಳು ಅರ್ಜಿದಾರ ಮಲ್ಲಿಕಾರ್ಜುನ ಸ್ವಾಮಿಯವರೊಂದಿಗೆ ಸ್ಥಳ ಪರಿಶೀಲನೆಗೈದು, ಅಸ್ತಿತ್ವದಲ್ಲಿದ್ದ ಭೂಮಿಯ ಪರಿವರ್ತನೆಗೆ ಅನುಮತಿಸಿದ್ದಾರೆ. ಅಸ್ತಿತ್ವದಲ್ಲಿಯೇ ಇಲ್ಲದ ಕೆಸರೆ ಗ್ರಾಮದ ಅಸ್ತಿತ್ವವೇ ಇಲ್ಲದ ಕೃಷಿ ಭೂಮಿಗೆ ಕಂದಾಯವನ್ನು ಕಟ್ಟುತ್ತಾ ಬರಲಾಗಿದೆ. ಅದನ್ನು ದಾನಪತ್ರದ ಮೂಲಕ ಮುಖ್ಯಮಂತ್ರಿಯವರ ಭಾವಮೈದುನ, ಮುಖ್ಯಮಂತ್ರಿಯವರ ಪತ್ನಿಯಾದ ತನ್ನ ಸಹೋದರಿಗೆ ನೀಡಿರುತ್ತಾರೆ.

ಅಸ್ತಿತ್ವದಲ್ಲಿಯೇ ಇಲ್ಲದ ಭೂಮಿಯನ್ನು ಹೇಗೆ ದಾನ ಮಾಡಲು ಬರುತ್ತದೆ ಎಂದು ಪ್ರಶ್ನಿಸಿದರು. ಪ್ರಶ್ನಾರ್ಹ ಭೂಮಿಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿರುವ ವೇಳೆಯಲ್ಲಿ ಅರ್ಜಿದಾರರು (ಸಿದ್ದರಾಮಯ್ಯ) ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಅಗಿದ್ದರು. ಅಸ್ತಿತ್ವದಲ್ಲಿಯೇ ಇಲ್ಲದ ಭೂಮಿಗೆ, ಮುಡಾ ತನ್ನ ಹೆಸರಿನಲ್ಲಿ ಹಕ್ಕುಪತ್ರ ಹೊಂದಿರುವ ಭೂಮಿಗೆ ಪರಿಹಾರವಾಗಿ ಮುಖ್ಯಮಂತ್ರಿಯವರ ಪತ್ನಿಗೆ ಹದಿನಾಲ್ಕು ನಿವೇಶನಗಳನ್ನು ನೀಡಲಾಗಿದೆ. ಇಲ್ಲಿ ಮುಖ್ಯಮಂತ್ರಿಯವರ ಕಚೇರಿಯ ಪಾತ್ರ ವಿವಿಧ ಹಂತಗಳಲ್ಲಿದೆ. ಪರಿಹಾರದ ನಿವೇಶನಗಳನ್ನು ನೀಡುವ ಕುರಿತಾದ ನಿರ್ಣಯಗಳನ್ನು ಕೈಗೊಳ್ಳುವ ಸಭೆಗಳಲ್ಲಿ ಮುಖ್ಯಮಂತ್ರಿಯವರ ಪುತ್ರ (ಡಾ. ಯತೀಂದ್ರ) ಸಹ ಭಾಗಿಯಾಗಿದ್ದರು ಎಂದು ನ್ಯಾಯಾಲಯದ ಗಮನಸೆಳೆದರು. ಮುಖ್ಯಮಂತ್ರಿಯವರು ಪ್ರಭಾವ ಬೀರಿರುವುದು ಅವರ ಅಧಿಕೃತ ಕರ್ತವ್ಯದ ಭಾಗವಲ್ಲದೆ ಇರುವುದರಿಂದ ರಾಜ್ಯಪಾಲರ ಅನುಮತಿಯ ಕುರಿತಾದ ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಇಲ್ಲಿ ಅನ್ವಯವಾಗುವುದಿಲ್ಲ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.

 

bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon