ಗಣಪತಿ ಜೊತೆಗೆ ಮಂಟಪೂ ಸಹ ಪರಿಸರ ಸ್ನೇಹಿಯಾಗಿರಲಿ: ಡಾ. ಎಚ್. ಕೆ. ಎಸ್. ಸ್ವಾಮಿ.

 

ಚಿತ್ರದುರ್ಗ: ಗಣಪತಿ ಪ್ರತಿಷ್ಠಾಪನೆಯ ಜೊತೆಗೆ ಪರಿಸರಸ್ನೇಹಿ ಮಂಟಪವೂ ಸಹ ಇದ್ದರೆ ಅದು ಸಂಪೂರ್ಣ ಪರಿಸರಸ್ನೇಹಿ ಗಣಪತಿ ಹಬ್ಬವಾಗುತ್ತದೆ.

ಅದಕ್ಕಾಗಿ ಯುವಕರಲ್ಲಿ, ಜನಸಾಮಾನ್ಯರಲ್ಲಿ, ಗಣಪತಿಯ ಜೊತೆ ಜೊತೆಗೆ ಪರಿಸರಸ್ನೇಹಿ ಮಂಟಪವನ್ನು ಸೃಷ್ಟಿಸುವಂತೆ, ಅದರಲ್ಲಿರುವ ಎಲ್ಲಾ ಸಾಮಗ್ರಿಗಳು ಸಹ ಪರಿಸರದಿಂದಲೇ ಬಂದಂತವಾಗಿದ್ದರೆ, ಮತ್ತು  ಅದು ಪರಿಸರದಲ್ಲಿ ಬೇಗ ಕೊಳೆಯುವಂತಾಗಿದ್ದರೆ, ಅದು ಬಹಳ ಸುಂದರವಾದ, ಪ್ರಭಾವಶಾಲಿಯಾದ ಗಣಪತಿಯಾಗುತ್ತದೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ .ಹೆಚ್. ಕೆ.ಎಸ್. ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.

Advertisement

ಸಾಮಾನ್ಯವಾಗಿ ಸ್ಥಳೀಯವಾಗಿ ಸಿಗುವ ವಸ್ತುಗಳಾದ ಮಾವಿನ ತೋರಣ, ಕಬ್ಬು, ಬಾಳೆಹಣ್ಣಿನ ಗಿಡ, ಮುಂತಾದ ವಸ್ತುಗಳಿಂದಲೇ ಮಂಟಪವನ್ನು ನಿರ್ಮಿಸಿ, ಆಯೋಜಕರು ತಮ್ಮ ಕೈಕಾಲುಗಳನ್ನು ಬಳಸಿ, ಸುಂದರವಾದ ಮಂಟಪ ನಿರ್ಮಿಸುವುದೇ ಒಂದು ಕಲೆಯಾಗಿರುತ್ತದೆ. ಅಂತಹ ಕಲೆಯನ್ನು ಅಧಿಕಾರಿಗಳು, ಮಾಲಿನ್ಯ ಇಲಾಖೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಗುರುತಿಸಿ ಅವರನ್ನು ಪ್ರೋತ್ಸಾಹಿಸಿದರೆ, ನಗರದಲ್ಲಿರುವ ಪ್ರತಿಯೊಂದು ಮಂಟಪಗಳು ಸಹ ಪರಿಸರ ಸ್ನೇಹಿಯಾಗಿರುತ್ತದೆ, ಇದರ ಬಗ್ಗೆ ಹೆಚ್ಚು ಜನಜಾಗೃತಿ ಕಾರ್ಯಕ್ರಮಗಳು ಆಗಬೇಕು ಎಂದರು.

ಅಯ್ಯಪ್ಪ ಸ್ವಾಮಿ ಪೂಜೆ ಮಾಡುವವರು ಬಾಳೆಕಂಬದಿಂದಲೇ ಅದ್ಭುತವಾದ ಮಂಟಪವನ್ನು ನಿರ್ಮಿಸುತ್ತಾರೆ, ಅದೇ ಕಲೆಯನ್ನ ಭದ್ರಾವತಿಯ ಹೊಸನಗರ ಬಡಾವಣೆಯಲ್ಲಿ ಯುವಕರ ತಂಡ, 18 ವರ್ಷಗಳಿಂದ ಪರಿಸರಸ್ನೇಹಿ ಮಂಟಪಗಳನ್ನು ರಚಿಸಿ, ಪರಿಸರಸ್ನೇಹಿ ಗಣಪತಿಯೆನ್ನ ಪೂಜಿಸಿ, ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. ತಾವೆ ಸ್ವತಃ ಕೈಯಿಂದ ಮಣ್ಣಿನ ಗಣಪತಿಗಳನ್ನು ಮಾಡಿ, ಮಂಟಪವನ್ನು ನಿರ್ಮಿಸಿ, ಖರ್ಚಿಲ್ಲದೆ, ಕಡಿಮೆ ವೆಚ್ಚದಲ್ಲಿ, ಯಾವುದೇ ಪ್ಲಾಸ್ಟಿಕ್ ಬಳಕೆ ಮಾಡದೆ, ಪರಿಸರ ಹಾನಿ ಆಗುವಂತ ಯಾವುದೇ ವಸ್ತುಗಳನ್ನು ಬಳಕೆ ಮಾಡದೆ, ಸುಂದರವಾದ ಕೈಮಂಟಪವನ್ನು ನಿರ್ಮಿಸಿರುವುದು ಆಶ್ಚರ್ಯಕರವಾಗಿದೆ ಎಂದರು.

ರೈತರ ಮಕ್ಕಳಾಗಿದ್ದರಂತೂ ಜಮೀನಲ್ಲಿ ಸಿಗುವ ಹಲವಾರು ವೈವಿಧ್ಯಮಯವಾದ ಹೂವುಗಳನ್ನ, ಕಾಡು ಹೂಗಳನ್ನ, ಕೈತೋಟದಲ್ಲಿ ಬೆಳೆಸುವ ಹೂಗಳ ಅಲಂಕಾರದಿಂದ ಮಂಟಪವನ್ನು ನಿರ್ಮಿಸಿ, ಅದ್ಭುತವಾದ ಗಣೇಶನ ಹಬ್ಬವನ್ನು ಆಚರಿಸಬಹುದು. ಗಣೇಶನ ಮುಂದೆ ಸಾಂಸ್ಕೃತಿಕ ಚಟುವಟಿಕೆ ಮುಖಾಂತರ, ಪರಿಸರ ಜಾಗೃತಿ ಮೂಡಿಸಿ, ಗಣೇಶ ಹಬ್ಬವನ್ನು ಸಾರ್ಥಕ ಗೊಳಿಸಿಕೊಳ್ಳಬಹುದು ಎಂದರು.

ಸ್ವತಂತ್ರ ಪೂರ್ವದಲ್ಲಿ ಜನರನ್ನ ಸಂಘಟಿಸಿ, ಅವರಲ್ಲಿ ದೇಶಾಭಿಮಾನ, ಸ್ವತಂತ್ರದ ಭಾವನೆಯನ್ನು ಮೂಡಿಸಲು ಗಣೇಶನನ್ನ ರೋಡಿಗೆ ತಂದು, ಮೆರವಣಿಗೆ ಮುಖಾಂತರ ಜನರನ್ನ ಬಡಿದೆಬ್ಬಿಸಿದಂಥ ಸಂದರ್ಭದಲ್ಲಿ ಸಹ ಪರಿಸರ ಸ್ನೇಹಿಯಾಗಿತ್ತು. ನಾವು ಇವತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಸುಲಭವಾಗಿ ಗಣೇಶನ ನಿರ್ಮಿಸಿ, ಕಡಿಮೆ ತೂಕ, ಕಡಿಮೆ ವೆಚ್ಚ, ಕಡಿಮೆ ಸಮಯದಲ್ಲಿ ಗಣೇಶನ ಮಾಡಬಹುದು ಎಂದು, ಅವುಗಳನ್ನ ಹೆಚ್ಚು ಬಳಕೆಗೆ ತಂದಿದ್ದೇವೆ. ಆದರೆ ಅವುಗಳನ್ನು ನೀರಿಗೆ ಬಿಟ್ಟಾಗ ಆಗುತ್ತಿರುವ ಹಾನಿಯನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳದೆ, ಆ ಗಣೇಶನನ್ನು ನಾವು ಮರುಬಳಕೆ ಮಾಡಲು ಸಾಧ್ಯವಾಗದೆ, ಮಾಲಿನ್ಯ ಹೆಚ್ಚಾಗುತ್ತಾ ಬಂದಿದೆ. ಆದ್ದರಿಂದ ಆದಷ್ಟು ಮಣ್ಣಿನ ಗಣಪತಿಯನ್ನೇ ಮಾಡಿ, ನಿರ್ದಿಷ್ಟವಾದ ಜಾಗದಲ್ಲಿ ವಿಸರ್ಜನೆ ಮಾಡಿ, ಪ್ಲಾಸ್ಟಿಕ್, ಪಟಾಕಿ ಬಳಕೆಯನ್ನು ನಿರ್ಭಂಧಿಸಿ, ಮೆರವಣಿಗೆಯಲ್ಲಿ ಹೆಚ್ಚು ಶಬ್ದ ಉಂಟು ಮಾಡುವ ಉಪಕರಣಗಳನ್ನು ಬಳಸದೆ, ಪರಿಸರ ಜೊತೆ ಜೊತೆಗೆ ಹಬ್ಬಗಳನ್ನ ಆಚರಿಸುವುದನ್ನು ನಾವು ರೂಡಿ ಮಾಡಿಕೊಳ್ಳಬೇಕಾಗಿದೆ ಎಂದು ವಿನಂತಿಸಿಕೊಂಡಿದ್ದಾರೆ.

ಇಂಥ ಮಂಟಪಗಳನ್ನ ಮಾಧ್ಯಮದವರು, ಪತ್ರಿಕೆಯವರು ಬೆಳಕಿಗೆ ತಂದು, ಸಾಧ್ಯವಾದರೆ ನಗರದಲ್ಲಿ, ಅಂತವರಿಗೆ ಒಂದು ಉತ್ತಮ ಬಹುಮಾನವನ್ನು ಘೋಷಿಸಿ, ಹೆಚ್ಚು ಪ್ರಚಾರ ಕೊಟ್ಟಷ್ಟು, ಜನರು ಪರಿಸರಸ್ನೇಹಿ ಗಣಪತಿ ಹಬ್ಬವನ್ನು ಆಚರಿಸಲು ಅನುಕೂಲಕರವಾಗುತ್ತದೆ. ಬಹಳಷ್ಟು ಗಣಪತಿ ಮಂಟಪಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಪ್ಲಾಸ್ಟಿಕ್, ಥರ್ಮಾಕೋಲ್, ಇನ್ನಿತರ ಪರಿಸರಕ್ಕೆ ಹಾನಿ ಆಗುವಂಥ ವಸ್ತುಗಳನ್ನು ಹೆಚ್ಚು ಬಳಕೆ ಮಾಡಿ, ಪ್ಲಾಸ್ಟಿಕ್ ಹಾರಗಳು, ಪ್ಲಾಸ್ಟಿಕ್ ಹೂಗಳು, ಅವುಗಳನ್ನ ಗಣಪತಿ ಬಿಡುವ ಸಮಯದಲ್ಲಿ ಸಹ ರಸ್ತೆ ಬದಿಯಲ್ಲಿ ಚೆಲ್ಲುತ್ತಾ, ನೀರಿಗೆ ಹಾಕಿ, ಕೆರೆಗಳನ್ನ ಮಾಲಿನ್ಯಗೊಳಿಸಿ, ಅತಿ ಹೆಚ್ಚು  ಪಟಾಕಿಯನ್ನು ಸಿಡಿಸಿ ವಿಜೃಂಭಣೆಯಲ್ಲಿ ಪರಿಸರ ಹಾನಿ ಮಾಡುತ್ತಿರುವುದನ್ನು ನಾವು ಹೇಗಾದರೂ ಮಾಡಿ ತಪ್ಪಿಸಬೇಕಾಗಿದೆ ಎಂದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement