ಮುಂಬೈ : ಮುಂಬೈನಲ್ಲಿ ಕೇವಲ 5 ಗಂಟೆಗಳ ಅವಧಿಯಲ್ಲಿ ಸುರಿದ ಭಾರೀ ಮಳೆಗೆ ಇಡೀ ಮುಂಬೈ ನಗರ ತತ್ತರಿಸಿದ್ದು, ಮಳೆಯಿಂದಾಗಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ ಸಂಜೆ ಹೊತ್ತಿನಲ್ಲಿ ಮಳೆ ಶುರುವಾಯಿತು. 5 ಗಂಟೆಗಳ ಅವಧಿಯಲ್ಲಿ ಮುಂಬೈ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆ ಸುರಿದಿದೆ.
ಮುಂಬೈ ನಲ್ಲಿ ನಿನ್ನೆ ಸಂಜೆ ಹೊತ್ತಿಗೆ ಸುರಿದ ಮಳೆ ಇಡೀ ಮುಂಬೈ ನಗರವನ್ನು ಪ್ರವಾಹ ಪರಿಸ್ಥಿತಿಗೆ ತಂದಿದೆ. ಪ್ರಯಾಣಿಕರು ರಸ್ತೆಗಳಲ್ಲಿ, ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡರು. ಭಾರೀ ಮಳೆಗೆ ಬಲಿಯಾದವರಲ್ಲಿ 45 ವರ್ಷದ ಮಹಿಳೆಯೊಬ್ಬರು ಅಂಧೇರಿ ಪೂರ್ವದ ನುಲ್ಲಾದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಲ್ಯಾಣ್ನ ವರಪ್ ಗ್ರಾಮದಲ್ಲಿ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಖೋಪೋಲಿಯ ಜೆನಿತ್ ಜಲಪಾತದ ಬಳಿ ಮತ್ತೋರ್ವ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಗುರುವಾರ ಬೆಳಗ್ಗೆ 8:30 ರವರೆಗೆ ರೆಡ್ ಅಲರ್ಟ್ ಇರುವ ಹಿನ್ನೆಲೆಯಲ್ಲಿ ಮುಂಬೈ ಮತ್ತು ಥಾಣೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುಣೆಯ ಶಿವಾಜಿನಗರದಲ್ಲಿ ಮಂಗಳವಾರ ಸಂಜೆ 5:30ರವರೆಗೂ 19.2 ಮಿಮಿ. ಮಳೆ ದಾಖಲಾಗಿತ್ತು. ಇದರಿಂದಾಗಿ ಭಾರತೀಯ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿ, ಮುಂದಿನ 24 ಗಂಟೆಗಳಲ್ಲಿ ತ್ರೀವ ಮಳೆಯಾಗುವ ಸಾಧ್ಯತೆಯಿದೆ ಎಂದು ಮೂನ್ಸೂಚನೆ ನೀಡಿತ್ತು. ಬಳಿಕ ಮಳೆಯ ತೀವ್ರತೆಯಿಂದಾಗಿ ಸೆ.25 ರಂದು ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಮಳೆಯ ತೀವ್ರತೆ ಹೆಚ್ಚಾಗಿದ್ದರಿಂದಾಗಿ ಪುಣೆ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ.