ಬಳ್ಳಾರಿ :ಜೈಲು ಪಾಲಾಗಿರುವ ನಟ ದರ್ಶನ್‌ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಐಟಿ ಅಧಿಕಾರಿಗಳು ದರ್ಶನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ವಿಚಾರಣೆ ನಡೆಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಬಳಸಿದ ಹಣ, ದರ್ಶನ್ರ ಮನೆ ಮಹಜರಿನ ವೇಳೆ ಸಿಕ್ಕ ಹಣ ಇನ್ನಿತರ ವಿಚಾರವಾಗಿ ಐಟಿ ಅಧಿಕಾರಿಗಳು, ದರ್ಶನ್ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರ ನಿವಾಸದ ಮೇಲೆ ದಾಳಿ ನಡೆಸಲು ಅನುಮತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕೊಲೆ ಪ್ರಕರಣದ ಹಿಂದಿನ ತನಿಖೆಯಿಂದ ನಟ ದರ್ಶನ್ ಕೊಲೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಲು ಇತರ ಆರೋಪಿಗಳಿಗೆ ಪಾವತಿಸಲು ತನ್ನ ಸ್ನೇಹಿತರೊಬ್ಬರಿಂದ 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ನಟ ಇದೇ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಹಣದ ಹೂಡಿಕೆಯ ವಿಚಾರವಾಗಿ ಈಗ ಪ್ರಶ್ನೆ ಮೂಡಿದ್ದು ಐಟಿ ಅಧಿಕಾರಿಗಳು ಇದೀಗ ದರ್ಶನ್ ಹಣ,ಮನೆ,ಸೊತ್ತುಗಳ ಮೇಲೆ ಕಣ್ಣು ಹಾಕಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಮೂವರ ಮೇಲಿನ ಕೊಲೆ ಆರೋಪವನ್ನೂ ಕೈಬಿಡಲಾಗಿದೆ.