ಮಕ್ಕಳನ್ನು ಹ್ಯಾಂಡ್‌ಬ್ಯಾಗ್ ರೀತಿ ಬಳಸಬೇಡಿ – ಐಶ್ವರ್ಯ ರೈ ಮೇಲೆ ಮಾಳವಿಕಾ ಅಸಮಾಧಾನ

ಬೆಂಗಳೂರು: ಮಕ್ಕಳನ್ನು ಹ್ಯಾನ್ಡ್ ಬ್ಯಾಗಿನಂತೆ ಜೊತೆಯಲ್ಲಿ ಎಲ್ಲಾ ಕಡೆ ಕರೆದುಕೊಂಡು ಹೋಗುವುದು ಎಂತಹ ಸಂಸ್ಕೃತಿ? ಆಫೀಸಿಗೆ, ಆಫೀಸ್ ಟೂರಿಗೆ ಹೋದಾಗ ಮಕ್ಕಳನ್ನು ಕರ್ಕೊಂಡು ಹೋದರೆ ಸುಮ್ಮನ್ನಿರುತ್ತಾರೆಯೇ ಬಾಸು? ಮಿಕ್ಕವರಿಗೆ ಆಫೀಸ್‌ ಇದ್ದ ಹಾಗೆ ನಮಗೆ ಶೂಟಿಂಗ್, ಕಾರ್ಯಕ್ರಮಗಳು, ಫೋಟೊ ಶೂಟ್ ಇಂತಹವೆಲ್ಲ. ಕನ್ನಡದ ಕಿರುತೆರೆ, ಹಿರಿತೆರೆ ನಟಿ ಮಾಳವಿಕಾ ಅವಿನಾಶ್ ಈ ಮೇಲಿನ ಮಾತುಗಳನ್ನು ಬಾಲಿವುಟ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಹೇಳಿದ್ದಾರೆ. ಬಾಲಿವುಡ್‌ ನಟಿ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯಳನ್ನು ಸಾಮಾನ್ಯವಾಗಿ ತಾವು ಎಲ್ಲಿಯೇ ಹೋದರೂ ಕರೆದುಕೊಂಡೇ ಹೋಗುತ್ತಾರೆ. ಸಿನಿಮಾ ಶೂಟಿಂಗ್, ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ಕಡೆಗೂ ಕರೆದುಕೊಂಡು ಹೋಗುತ್ತಾರೆ. ನಟಿ ಐಶ್ವರ್ಯಾ ರೈ ಹಾಗೂ ಆರಾಧ್ಯಳ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತದೆ. ಈ ಬಗ್ಗೆ ಬಹುಭಾಷಾ ನಟಿ ಮಾಳವಿಕಾ ಅವಿನಾಶ್​ ಸುಧೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನಿಮ್ಮ ಯಾವುದೋ ಅಸುರಕ್ಷತೆಯ ಕಾರಣ, ಹರೆಯದ ಹುಡುಗಿಯರನ್ನು ಕರೆದುಕೊಂಡು ಹೋಗುವುದರಿಂದ ಆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ತಾವು ತಮ್ಮ ತಾಯಂತ ತಲೆಯೊಳಗೆ ಸ್ಟಾರ್ ಆಗುತ್ತಾರೆ ಆ ಮಕ್ಕಳು. ತಾಯಿ ಹಾಕಿದ ಪರಿಶ್ರಮ, ಪಟ್ಟ ಕಷ್ಟ ಯಾವುದೂ ಆ ಮಕ್ಕಳಿಗೆ ಗೊತ್ತಿರುವುದಿಲ್ಲ. ಗೊತ್ತಾಗುವುದು ಬೇಡ. ಈ ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆಯೇ ತಾವೂ ಹೀರೋಯಿನ್ ಆಗುವ ಕನಸು ಕಾಣುತ್ತಾರೆ. ತನ್ನ ಪೊಸಿಶನ್‌ಅನ್ನು ಬಳಸಿಕೊಂಡು, ಆ ತಾಯಿ ಒಂದು ಪಿಕ್ಚರನ್ನೂ ಆ ಮಗ/ಮಗಳಿಗೆ ಕೊಡಿಸಿಬಿಡಬಹುದೇನೊ. ಶೂಟಿಂಗಲ್ಲಿ ತಾಯಿ ಮಾಡಿರುವ ಐವತ್ತು ಸಿನಿಮಾಗಳನ್ನು ತಾನೇ ಮಾಡಿದ್ದೇನೇನೊ ಎಂಬ ಆಟಿಟ್ಯೂಡ್. ಜೊತೆಗೆ ಏಳೆಂಟು ಜನ, ಕೈಗೊಬ್ಬ ಕಾಲ್ಗೊಬ್ಬ. ತಾಯಿ ಮೊದಲ ಚಿತ್ರ ಮಾಡುವಾಗ ಹಾಕಿದ್ದ ಹರಕಲು ಬಟ್ಟೆ ಚಪ್ಪಲಿ, ಯಾವುದೂ ಈ ಮಕ್ಕಳಿಗೆ ಗೊತ್ತಿರುವುದಿಲ್ಲ. ತೆರೆಯ ಮೇಲೆ ಕಾಣುತ್ತಿದ್ದಂತೆಯೇ, ಅಯ್ಯೋ, ಇವಳು ತಾಯಿಯಂತೆ ಎಲ್ಲಿದ್ದಾಳೆ ಎಂಬ ಕಂಪ್ಯಾರಿಸನ್ ಶುರುವಾಗುತ್ತದೆ. ಅವಳೆಂತಹ ಸುಂದರಿ, ಡ್ಯಾನ್ಸ್ರ್, ಪರ್ಫಾಮರ್…? ಮಗಳೇನೂ ಸುಖ ಇಲ್ಲ ಎಂದು ಸಾರಾಸಗಟಾವಾಗಿ ತೆಗೆದು ಹಾಕಿ ಬಿಡುತ್ತಾರೆ ಪ್ರೇಕ್ಷಕರು. ಪಿಕ್ಚರ್ ಓಡಿದರೆ ಸರಿ. ಓಡದೆ ಹೋದರೆ, ಮಂದಿನ ಹತ್ತು, ಇಪ್ಪತ್ತು ಮೂವತ್ತು ವರ್ಷಗಳು, ತಾನ್ಯಾಕೆ ತಾಯಿಯಂತಿಲ್ಲ, ತಾಯಿಯಂತೆ ಸ್ಟಾರ್ ಆಗಲಿಲ್ಲ ಎಂಬ ಕೊರಗು. ಸ್ಟಾರ್ ಮಕ್ಕಳಾಗಿ ಹುಟ್ಟುವುದು ಅದೃಷ್ಟವೇ. ಆದರೆ ಅದನ್ನೇ ಬದುಕೆಂದುಕೊಳ್ಳಬಾರದಿರಬೇಕು ಮಕ್ಕಳು. ತಮ್ಮದೊಂದು ವ್ಯಕ್ತಿತ್ವ, ಬದುಕು, ಗುರಿ ಇವೆಲ್ಲವೂ ಇರಬೇಕೆಂಬುದನ್ನು ಸ್ಟಾರ್ ತಂದೆ – ತಾಯಂದಿರೂ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಎಲ್ಲರಂತೆ ಸಾಮಾನ್ಯ ಬದುಕನ್ನು ಬದುಕುವ ಅವಕಾಶ ಮಾಡಿಕೊಡಬೇಕು. ಜ್ಯಾಕೀ ಚ್ಯಾನ್, ತಾನು ಮಗನನ್ನು ಬೆಳೆಸುವುದರಲ್ಲಿ ಸೋತಿದ್ದೇನೆ ಎಂಬುದನ್ನು ಎಲ್ಲೋ ಹೇಳಿಕೊಂಡದ್ದನ್ನು ನೋಡಿದ ನೆನಪು. ಜಾಕಿ ಚ್ಯಾನ್‌ಗೆ ಈಗ 41 ವರ್ಷ. ಬದುಕಲ್ಲಿ ಏನೂ ಆಗಿಲ್ಲ, ಸೋತ ನಟ ಅಷ್ಟೆ. ಜಾಕೀ ಎಂಥ ಲೆಜೆಂಡ್, ಮಗ ನೋಡಿ. ಸ್ಟಾರ್ ಮಕ್ಕಳು ಸ್ಟಾರ್ ಆಗಿಯೇ ಆಗುತ್ತಾರೆ ಎಂಬ ಶಾಸನವೇನಿಲ್ಲ. ಸೋತ ಎಷ್ಟೋ ಮಕ್ಕಳನ್ನು, ನಾನೇ ನೋಡಿದ್ದೇನೆ. ಹೋದಲ್ಲೆಲ್ಲಾ ಮಕ್ಕಳನ್ನು ಕೊಂಡು ಹೋಗುವ ಅಭ್ಯಾಸವನ್ನು ನಮ್ಮ ಸ್ಟಾರ್‌ಗಳು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯ ಹಸ್ತಕ್ಷೇಪ ಮಾಡುವುದೂ ಒಂದು ರೀತಿಯಲ್ಲಿ ಅವರ ಬಾಲ್ಯ ಯೌವ್ವನದ ಮೇಲೆ ಮಾಡುವ ಪ್ರಹಾರವೇ. ಪ್ರಪಂಚದಲ್ಲಿ ಎಲ್ಲವೂ ಇದೆ ಮಗಳೇ, ನನ್ನ ಆಯ್ಕೆಯ ಬದುಕು ಇದು, ನಿನ್ನದು ಇದೇ ಆಗಬಹುದು ಬೇರೆಯದಾಗಬಹುದು ಅಂತ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಕರ್ತವ್ಯವೇ. ನಾನು ಓದಿಲ್ಲ, ನೀನು ಮೊದಲು ಓದು. ಅಮೇಲೆ ಸ್ಟಾರ್‌ ಆಗೋ ಯೋಚನೆ ಮಾಡು. ಮುಖ್ಯವಾಗಿ ಸ್ಟಾರ್ ಆಗುವುದಕ್ಕೆ ಒಂದು ಎಕ್ಸ್ ಫ್ಯಾಕ್ಟರ್ ಇರುತ್ತದೆ. ಅದು ಅವರವರ ಅದೃಷ್ಟದ ಪರೀಕ್ಷೆ. ಗೆದ್ದರೂ ಸೋತರೂ ನೀನು ಕುಗ್ಗದೆ ಬದುಕಲ್ಲಿ ಗೆಲ್ಲಬೇಕು ಎಂದು ಎಷ್ಟೋ ಸ್ಟಾರ್ ಮಕ್ಕಳಿಗೆ ಹೇಳಬೇಕೆಂದು ನನಗೆ ಮನಸ್ಸಾಗುತ್ತದೆ. ‘ಸಾಕು ಬೇರೆಯವರ ಉಸಾಬರಿ. ನಿನ್ನ ಕೆಲಸ ನೀನು ನೋಡು. ನಿನ್ನ ಪ್ರಾಕ್ಟಿಕಲ್ ಸ್ವೀಕರಿಸುವ ಮನಸ್ಥಿತಿ ಅವರಿಗಿರುವುದಿಲ್ಲ’ ಅಂತ ಅವಿನಾಶ್ ಸುಮ್ಮನಾಗಿಸುತ್ತಾರೆ. ಇಷ್ಟಕ್ಕೂ ಕ್ರಿಕೆಟ್ ಸ್ಟಾರ್ಸ್ ಮಕ್ಕಳೇನು ಅವರಂತೆ ಸ್ಟಾರ್ಸಾಗುವುದಿಲ್ಲವಲ್ಲ. ಭಗವಂತ ನಮಗೆ ಅಂತ ಒಂದು ಮಾರ್ಗವನ್ನು ಮುಂಚೆಯೇ ನಿರ್ಧರಿಸುತ್ತಾನೆ. ತಾಯಿ, ವಿಶ್ವ ಸುಂದರಿ, ಹೋದಲೆಲ್ಲಾ ಆ ಪುಟ್ಟ ಹುಡುಗಿ ಬಾಲಂಗೋಚಿಯಂತ. ಒಂದು ಬದಿಯಲ್ಲಿ ಆಕೆಯನ್ನು ತಯಾರು ಮಾಡಿದ ಸ್ಟೈಲಿಸ್ಟ್, ಹೇರ್ ಡ್ರೆಸ್ಸರ್, ಮೇಕಪ್ ಮಾಡಿದವರು, ಮತ್ತೊಂದು ಕಡೆ ಆ ಹುಡುಗಿ. ಇದೆಂತಹ ಅವಸ್ಥೆ. ಆ ಮಗುವಿಗೆ, ಶಾಲೆ, ಓದು ಏನೂ ಇರುವುದಿಲ್ಲವೆ? ಹೀಗೆ ತಾಯಿಯ ಜಗತ್ತೆಲ್ಲ ಜೊತೆ ತಿರುಗಾಡುತ್ತಾಳಲ್ಲಾ? ತಾಯಿಗೆ ಹಾಗೆ ಉಡುಗೆ ತೊಟ್ಟು ಪೋಸ್ ಕೊಡುವುದು, ಅವಳ ವೃತ್ತಿ. ಈ ಮಗುವಿಗಲ್ಲೇನು ಕೆಲಸ? ಯಾಕೋ ಆ ದೃಶ್ಯವನ್ನು ನೋಡಿ ಬೇಜಾರಾಯಿತು. ನಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ನಾವೇ ಬಳಸಿಕೊಂಡು ಬಿಡುತ್ತೇವಾ? ಎಂದು ಮಾಳವಿಕಾ ಅವಿನಾಶ್​ ಪ್ರಶ್ನಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement