ಹುಬ್ಬಳ್ಳಿ : ಎಫ್‌ಐಆರ್ ದಾಖಲಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಮೈಸೂರು ದಸರಾ ಉದ್ಘಾಟನೆ ಬಿಡಿ, ಯಾವುದೇ ಸರ್ಕಾರಿ ಪತ್ರ, ಆದೇಶಗಳಿಗೂ ಸಹಿ ಕೂಡ ಮಾಡಬಾರದು. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ತೀರ್ಪು ನೀಡಿದ ಬಳಿಕ ನಾವು ಎಂದಿಗೂ ಕಾಂಗ್ರೆಸ್ ಪಕ್ಷದಂತೆ ವರ್ತಿಸಿಲ್ಲ. ದಸರಾ ಪವಿತ್ರ ಆಚರಣೆಯಾಗಿದ್ದು, ದಸರಾ ಉದ್ಘಾಟನೆ ಅಲ್ಲ, ಸಿದ್ದರಾಮಯ್ಯ ಏನೂ ಮಾಡಬಾರದು. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು ಎಂದು ಹೇಳಿದರು.
ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್, ಸಚಿವ ಕುಮಾರಸ್ವಾಮಿ ವಿರುದ್ಧ ಹಂದಿ ಪದ ಬಳಸಿ ಪತ್ರ ಬರೆದಿರುವುದು ಕಾಂಗ್ರೆಸ್‌ಗೆ ಮುಳುವಾಗಲಿದೆ. ಗೌರವಯುತ ಪದ ಬಳಕೆ ಮಾಡುವುದು ಅಧಿಕಾರಿ ಕರ್ತವ್ಯ. ನಾನು ನೋಡಿದ ಹಾಗೆ ಕುಮಾರಸ್ವಾಮಿ ಅವರು ಏಕವಚನದಲ್ಲಿ ಮಾತನಾಡಿಲ್ಲ. ಆದರೆ, ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇದು ಅಧಿಕಾರಿಯ ಅಹಂಕಾರದ ಪರಮಾವಧಿ. ಅವರು ಕುಮಾರಸ್ವಾಮಿ ಅವರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಇದನ್ನು ಯಾವ ಕಾಲಕ್ಕೂ ಒಪ್ಪಿಕೊಳ್ಳಲು ಆಗುವುದಿಲ್ಲ. ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುವುದು. ಈ ಸರ್ಕಾರವೇ ಕಾಯಂ ಅಧಿಕಾರದಲ್ಲಿ ಇರುತ್ತದೆ ಎಂಬ ಭ್ರಮೆಯಲ್ಲಿ ಅಧಿಕಾರಿಗಳು ಇದ್ದಲ್ಲಿ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಎಡಿಜಿಪಿ ಚಂದ್ರಶೇಖರ ಅವಹೇಳನಕಾರಿ ಪದ ಬಳಕೆ ಮಾಡಿರುವುದು ರಾಜ್ಯದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ರಾಜ್ಯದಲ್ಲಿ ಆಡಳಿತವೇ ಇಲ್ಲ. ಈ ಸರ್ಕಾರ ಯಾವುದಕ್ಕೂ ಸಹಕರಿಸುವುದಿಲ್ಲ ಎಂದರು.