ಚಿತ್ರದುರ್ಗ: ಮನೆಗಳಿಗೆ ಅತಿಥಿಗಳು ಬರುವಂತೆ ಇದೇ ತಿಂಗಳ 12 ರಿಂದ 27 ರವರೆಗೆ *ಅಟ್ಲಾಸ್* ಎಂಬ ಧೂಮಕೇತು ಬರಿಗಣ್ಣಿಗೆ ಗೋಚರವಾಗಲಿದೆ.
2023 ರ ಜನವರಿ ತಿಂಗಳಲ್ಲಿ ದೂರದರ್ಶಕದಿಂದ ನೋಡಿದಾಗ ಭೂಮಿಯಿಂದ 100 ಕೋಟಿ ಕಿ. ಮೀ ದೂರದಲ್ಲಿತ್ತು. ಇದೀಗ ಸೂರ್ಯನನ್ನು ಸುತ್ತು ಹಾಕಿ ಭೂಮಿಯ ಸಮೀಪ ಬರುತ್ತಿದೆ. ಭೂಮಿಯ ಕಕ್ಷೆಯಲ್ಲಿ ಸುಮಾರು 17 ದಿನಗಳ ಕಾಲ ಇದ್ದು, ತನ್ನ ಸ್ವಸ್ಥಾನಕ್ಕೆ ಹಿಂದಿರುಗುತ್ತದೆ. ಹೀಗೆ ಬರುತ್ತಿರುವ *ಅಟ್ಲಾಸ್* ಧೂಮಕೇತುವನ್ನು ಪ್ರತಿಯೊಬ್ಬರೂ ಬರಿಗಣ್ಣಿನಿಂದ ನೋಡಬಹುದಾಗಿದೆ.
ಇದೇ ಅಕ್ಟೋಬರ್ 12 ರಂದು ಸಂಜೆ ವೇಳೆ ಪಶ್ಚಿಮದಲ್ಲಿ *ಉರಗದರ* ಎಂಬ ನಕ್ಷತ್ರಪುಂಜದ ಬಳಿ ಬರಿಗಣ್ಣಿಗೆ ಕಾಣಿಸಲಿದೆ. ಇದರಿಂದ ಭೂಮಿಗಾಗಲೀ, ಪಶು ಪಕ್ಷಿ ಪ್ರಾಣಿಗಳಿಗಾಗಲೀ ಯಾವುದೇ ರೀತಿಯ ತೊಂದರೆಯಿಲ್ಲ. ಯಾರೂ ಭಯ, ಆತಂಕಪಡುವ ಅಗತ್ಯವಿಲ್ಲ.
ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿರುವ ಈ ಧೂಮಕೇತುವನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ. ಸಂಪರ್ಕಕ್ಕಾಗಿ 9448565534