ಬೆಂಗಳೂರು : ಸಚಿವರಿಗೆ ಗೌರವ ಕೊಟ್ಟು ನಾನು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ಅದೇ ನೈತಿಕತೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆಯನ್ನ 4 ಜನ ಮಂತ್ರಿಗಳು ಪಡೆಯಲಿ. ಅಥವಾ ಪರಮೇಶ್ವರ್ ಬಿಟ್ಟು ಉಳಿದ 3 ಜನ ಸಚಿವರು ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ಮೇಲಿನ ಪ್ರೀತಿ ಅನಾವರಣ ಮಾಡಲಿ ಅಂತ ವಿಪಕ್ಷ ನಾಯಕ ಆರ್.ಅಶೋಕ್ 4 ಜನ ಸಚಿವರಿಗೆ ಸವಾಲ್ ಹಾಕಿದ್ದಾರೆ.
ಅಶೋಕ್ ವಿರುದ್ಧ ಭೂ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದ್ದ ಬೆನ್ನಲ್ಲೇ 4 ಜನ ಸಚಿವರಿಗೆ ತಿರುಗೇಟು ಕೊಟ್ಟ ಅಶೋಕ್, ಸಚಿವರಿಗೆ ನಾನು ಕೊಟ್ಟಿರೋ ಸವಾಲನ್ನ 24 ಗಂಟೆ ಒಳಗೆ ಸ್ವೀಕಾರ ಮಾಡಲಿ ಅಂತ ಸವಾಲ್ ಹಾಕಿದ್ರು.
ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ನನ್ನ ಪರ ತೀರ್ಪು ಕೊಟ್ಟಿದೆ. ಸಿದ್ದರಾಮಯ್ಯ ರೀತಿ ತನಿಖೆಗೆ ಆದೇಶ ಮಾಡಿಲ್ಲ. ಹೀಗಿದ್ರೂ ದ್ವೇಷದ ರಾಜಕೀಯಕ್ಕಾಗಿ ನನ್ನ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ.