ಮಂಗಳೂರು: ರಜಾ ದಿನಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ಶುಲ್ಕ ವಸೂಲಿ ಮಾಡುವ ಖಾಸಗಿ ಬಸ್ ಮಾಲೀಕರು ತಮ್ಮ ಚಾಳಿಯನ್ನು ಈಗಲೂ ಮುಂದುವರಿಸಿದ್ದಾರೆ.
ಈ ಭಾರಿ ಬಾರಿ ಸರಣಿ ರಜೆಗಳು ಬಂದಿರುವುದರಿಂದ ದುಪ್ಪಟ್ಟು ಪ್ರಯಾಣ ಶುಲ್ಕ ವಸೂಲಿಯನ್ನು ಅನೇಕ ಕಡೆ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ.
ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಊರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.
ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ-ಗಣಪತಿ ಹಬ್ಬದ ಸಮಯದಲ್ಲೂ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ ದರ ಏರಿಕೆ ಮುಂದುವರಿದಿದೆ.
ವಾರಾಂತ್ಯದಲ್ಲಿ ಬಂದಿರುವುದರಿಂದ ಬೆಂಗಳೂರಿನಿಂದ ವಿವಿಧೆಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆಯೂ ಅಧಿಕವಾಗಿದೆ. ಇದು ಕೂಡ ಟಿಕೆಟ್ ದರ ಹೆಚ್ಚಳಕ್ಕೆ ಕಾರಣವಾಗಿದೆ.
ಅ.10ರಿಂದಲೇ ಕೆಲ ಖಾಸಗಿ ಬಸ್ಗಳ ಟಿಕೆಟ್ ದರಲ್ಲಿ ಏರಿಕೆಯಾಗಿದ್ದು ಹಬ್ಬ ಮುಗಿದು ವಾಪಸ್ ಬರುವವರೆಗೂ ದರ ಏರಿಕೆ ಬಿಸಿ ಮುಟ್ಟಲಿದೆ.
ಈ ಬಾರಿ ಅ.12 ಎರಡನೇ ಶನಿವಾರ ಮತ್ತು ಅ.13 ರವಿವಾರ ಇದ್ದ ಕಾರಣ ಅ.11ರಂದೇ ಬೆಂಗಳೂರು, ಮೈಸೂರು ಸಹಿತ ವಿವಿಧ ಕಡೆಗಳಿಂದ ಊರಿಗೆ ಜನ ಹೊರಡುತ್ತಾರೆ. ಇದನ್ನೇ ಬಂಡವಾಳವಾಗಿರಿಸಿದ ಖಾಸಗಿ ಬಸ್ಗಳು ಟಿಕೆಟ್ ದರ ಮೂರು ಪಟ್ಟು ಹೆಚ್ಚಿಸಿದೆ.
ಖಾಸಗಿ ಬಸ್ಗಳಲ್ಲಿ ಅ.11ರಂದು ಬೆಂಗಳೂರಿನಿಂದ ಮಂಗಳೂರಿಗೆ ಅತೀ ಹೆಚ್ಚಿನ ದರ 3,500 ರೂ. ಇದೆ. ಅದೇ ರೀತಿ, ಮಂಗಳೂರಿನಿಂದ ಮೈಸೂರಿಗೆ 1,200 ರೂ., ಬಳ್ಳಾರಿಗೆ 950 ರೂ., ಬಾಗಲಕೋಟೆ 1,500 ರೂ., ಕೊಪ್ಪಳ 2,600 ರೂ., ವಿಜಯಪುರ 1,500 ರೂ. ಇದೆ. ಹಬ್ಬಕ್ಕೆ ಕೆಲ ದಿನ ಬಾಕಿ ಇರುವಾಗಿನಿಂದಲೇ ಏರುಗತಿಯಲ್ಲಿ ಸಾಗಿರುವ ಬಸ್ ಪ್ರಯಾಣ ದರ ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.