ಬೆಂಗಳೂರು : ತಮ್ಮ ಮೇಲೆ ಅತ್ಯಾಚಾರವೆಸಗಿ, ಕಿರುಕುಳ ನೀಡಿದ್ದಾರೆಂದು ಮಹಿಳೆಯೊಬ್ಬರು ನೀಡಿರುವ ದೂರಿನನ್ವಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ವಿನಯ್ ಕುಲಕರ್ಣಿ ಹಾಗೂ ಅವರ ಆಪ್ತ ಅರ್ಜುನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 506, 504, 201, 366, 376, 323, 354 ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. 2022ರಲ್ಲಿ ತಾವು ಶಾಸಕ ವಿನಯ್ ಕುಲಕರ್ಣಿ ಅವರನ್ನ ಭೇಟಿ ಮಾಡಿದ್ದು, ಆ ಬಳಿಕ ರೈತರೊಬ್ಬರಿಂದ ಅವರು ನನ್ನ ಫೋನ್ ನಂಬರ್ ಪಡೆದಿದ್ದರು.
ನಂತರದಲ್ಲಿ ರಾತ್ರಿ ವೇಳೆಯೂ ನನಗೆ ಕರೆ ಮಾಡಲು ಪ್ರಾರಂಭಿಸಿದ್ದರು. ಕೆಲವು ತಿಂಗಳ ನಂತರ, ಬೆತ್ತಲೆಯಾಗಿದ್ದಾಗ ವೀಡಿಯೊ ಕರೆ ಮಾಡುವಂತೆ, ಹೆಬ್ಬಾಳದಲ್ಲಿರುವ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಶಾಸಕರ ಮನೆಗೆ ಬರದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೌಡಿಗಳು ಬೆದರಿಕೆ ಹಾಕಿದರು.ಏಪ್ರಿಲ್‌ನಲ್ಲಿ ವಿನಯ್ ಕುಲಕರ್ಣಿಯವರು ನನ್ನನ್ನು ಬೆಳಗಾವಿಗೆ ಕರೆದರು, ಅಲ್ಲಿ ನನ್ನನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದರು. ಆದರೆ ಅದೇ ಸಂದರ್ಭದಲ್ಲಿ ಕೆಲವರು ಶಾಸಕರನ್ನು ಭೇಟಿಯಾಗಲು ಬಂದಾಗ ನಾನು ತಪ್ಪಿಸಿಕೊಂಡಿದ್ದೆ. ಆಗಸ್ಟ್ 24 ರಂದು ಕೆಲಸದ ನಿಮಿತ್ತ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದೆ.
ಆಗ ಕರೆ ಮಾಡಿ ಹೆಬ್ಬಾಳದ ಮನೆಗೆ ಬರುವಂತೆ ಸೂಚಿಸಿದ್ದರು. ಕಾರಿನಲ್ಲಿ ಒಬ್ಬರೇ ಬಂದು ವಿಮಾನ ನಿಲ್ದಾಣ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ ಎಸಗಿದರು. ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಸುತ್ತೇನೆ ಎಂದು ಆಮಿಷವೊಡ್ಡಿದ್ದರು. ನಂತರ 2022ರ ಸೆಪ್ಟೆಂಬರ್‌ನಲ್ಲಿ ಪುನಃ ಭೇಟಿ ಮಾಡಿದ್ದಾಗ ನನ್ನ ಫೋನ್ ತೆಗೆದುಕೊಂಡು ಅವರ ಪಕ್ಷದ ಸದಸ್ಯನೊಬ್ಬನ ಕೈಗೆ ಇರಿಸಿ ಫೋಟೋ ಹಾಗೂ ವಿಡಿಯೋ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಬಳಿಕ ಫೋನ್ ನನಗೆ ನೀಡಿದದರು. ಇದಾದ ಬಳಿಕ ನಾನು ಮತ್ತು ಶಾಸಕರ ನಡುವಿನ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ನಾನೇ ಆಡಿಯೋ ವೈರಲ್ ಮಾಡಿದ್ದೇನೆಂದು ಶಾಸಕರು ಶಂಕಿಸಿದ್ದರು. ಬಳಿಕ ನಾನು ಅರ್ಜುನ್ ಅವರಿಗೆ ಕರೆ ಮಾಡಿ ಆಡಿಯೋ ಲೀಕ್ ಮಾಡಿದ್ದು ನಾನಲ್ಲ ಎಂದು ಹೇಳಿದ್ದೆ.
ಆದರೆ, ಅವರು ನಂಬದೆ ನನ್ನನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದರು. ಅಕ್ಟೋಬರ್ 2ರಂದು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದರು. ಮರುದಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಯಾರಿಗೂ ವಿಚಾರ ತಿಳಿಸದಂತೆ ಬೆದರಿಕೆ ಹಾಕಿದರು. ನಂತರ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಅರ್ಜುನ್ ಅವರಿಗೆ ಸೂಚಿಸಿದ್ದರು” ಎಂದು ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಸಂಜಯನಗರ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿರುವುದಾಗಿ ತಿಳಿಸಿದ್ದಾರೆ.