ಉಡುಪಿ: ಮಲ್ಪೆ ಪರಿಸರದಲ್ಲಿ ನಕಲಿ ಆಧಾರ್ ಕಾರ್ಡ್ ನೊಂದಿಗೆ ಕೆಲಸಕ್ಕೆ ಬಂದು ವಡಬಾಂಡೇಶ್ವರದ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಏಳು ಮಂದಿ ಬಾಂಗ್ಲಾ ದೇಶಿಯರು ಸೇರಿದಂತೆ ಒಟ್ಟು 9 ಮಂದಿಯನ್ನು ಮಲ್ಪೆ ಪೊಲಿಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಆರಿಸಿಕೊಂಡು ಬಂದಿದ್ದ ಬಾಂಗ್ಲಾದೇಶೀಯರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಕಲಿ ಪಾಸ್ ಪೋರ್ಟ್ ಬಳಸಿ ದುಬೈಗೆ ತೆರಳಲು ಪ್ರಯತ್ನಿಸಿದ್ದ ಬಾಂಗ್ಲಾ ದೇಶದ ಮುಹಮ್ಮದ್ ಮಾಣಿಕ್ ಎಂಬಾತನನ್ನು ಇಮಿಗ್ರೇಷನ್ ಅಧಿಕಾರಿಗಳ ಪರಿಶೀಲನೆ ವೇಳೆ ಈತ ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿ ಎಂದು ತಿಳಿದುಬಂದಿತ್ತು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಮಾಣಿಕ್ ಚೌಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೆ ಹಲವರು ಬಾಂಗ್ಲಾ ದೇಶಿ ಯುವಕರು ಮಲ್ಪೆಯಲ್ಲಿರುವುದು ತಿಳಿದುಬಂದಿದೆ. ಅದರಂತೆ ಮಲ್ಪೆ ಪೊಲೀಸರು ಹಕೀಂ ಅಲಿ, ಸುಜೋನ್, ಇಸ್ಮಾಯೀಲ್, ಕರೀಂ, ಸಲಾಂ, ರಾಜಿಕುಲ್, ಮುಹಮ್ಮದ್ ಸಾಜಿಬ್, ಕಾಜೋಲ್, ಉಸ್ಮಾನ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ನಕಲಿಯಾಗಿ ಆಧಾರ್ ಕಾರ್ಡ್ ಸೃಷ್ಟಿಸಿ ಇವರು ಸುಮಾರು 3 ವರ್ಷಗಳಿಂದ ಇಲ್ಲಿ ವಾಸವಿರುವುದು ಪತ್ತೆಯಾಗಿದೆ. ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದವ. ಆರೋಪಿಗಳ ಪೈಕಿ ಉಸ್ಮಾನ್ ಅಕ್ರಮವಾಗಿ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಕ್ಕೆ ಪಡೆದವರನ್ನು ಮಲ್ಪೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.