ಕೊಪ್ಪ: ಸಾಮಾಜಿಕ ಜಾಲತಾಣದಲ್ಲಿ ಅನೈತಿಕ ಫೋಟೋಗಳು ವೈರಲ್ ಆಗುತ್ತಿದ್ದ ಅವಮಾನ ತಾಳಲಾರದೆ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಸದ್ಯ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೊಪ್ಪ ಕಾಲೇಜೊಂದರ ವಿದ್ಯಾರ್ಥಿನಿ ಕೆಲ ಅನ್ಯಧರ್ಮೀಯ ಯುವಕರ ಜೊತೆ ಕಾಡೊಂದರಲ್ಲಿ ಸಿಕ್ಕಿಬಿದ್ದಳೆಂದು ಫೋಟೋಗಳು ರಾಜ್ಯಾದ್ಯಂತ ದಿಢೀರ್ ವೈರಲ್ ಆಗಿದ್ದವು. ಘಟನೆ ಕುರಿತಂತೆ ಮಾಹಿತಿ ನೀಡಿದ್ದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾಟೆ ವಿಕ್ರಂ ‘ಈ ಘಟನೆ ನಡೆದು ವಾರಗಳು ಕಳೆದಿವೆ. ಸಾಮಾಜಿಕ ಜಾಲತಾಣದಲ್ಲಿ ಹರಡತ್ತಿರುವಂತೆ ಯಾವುದೇ ಘಟನೆ ಸಂಭವಿಸಿರಲಿಲ್ಲ’ ಎಂದಿದ್ದರು.
ಅಸಲಿ ಕಥೆ ಏನು?
ಕೊಪ್ಪ ತಾಲ್ಲೂಕಿನ ಕಪಿನ ಎಂಬಲ್ಲಿ 15 ದಿನದ ಹಿಂದೆ ಈ ಘಟನೆ ನಡೆದಿತ್ತು. ಮೂವರು ಮುಸ್ಲಿಂ ಯುವಕರ ಜೊತೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಹಾಗೂ ಯುವಕರ ಮೇಲೆ ಸ್ಥಳೀಯ ಸಂಘಟನೆಯವರು ಎನ್ನಲಾದ ಕೆಲವರು ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದಾದ ಬಳಿಕ ಕಳೆದ ಮೂರು ದಿನಗಳಿಂದ ಆಕೆ ಯುವಕರ ಜೊತೆಗಿರುವ ಫೋಟೋಗಳು ರಾಜ್ಯಾದ್ಯಂತ ವೈರಲ್ ಆಗಿತ್ತು. ಈ ಹಿನ್ನಲೆ ಅವಮಾನ ತಾಳಲಾರದೆ ವಿದ್ಯಾರ್ಥಿನಿ ಕಾಲೇಜು ಆವರಣದಲ್ಲೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಳಿಕ ಎಚ್ಚೆತ್ತ ಪೊಲೀಸರು ಇದೀಗ ನೈತಿಕ ಪೊಲೀಸ್ ಗಿರಿ ನಡೆಸಿದವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.