ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿಗೆ ಅದ್ದೂರಿ ತೆರೆ

ಮೈಸೂರು :ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿಗೆ ಅದ್ದೂರಿ ತೆರೆ ಬಿದ್ದಿದೆ. ದಸರಾ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದ್ದರು. ರಾಜ ಗಾಂಭೀರ್ಯದಿಂದ ಜಂಬೂಸವಾರಿಯು ಬಹಳ ವಿಜೃಂಭಣೆಯಿಂದ ಜರುಗಿತು.

4:45 ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದ್ದರು. ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ, ಸಚಿವ ಶಿವರಾಜ್‌ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ , ಎಸ್‌ಪಿ ಸಾಥ್‌ ನೀಡಿದ್ದರು.

ಸತತ 5ನೇ ಬಾರಿಗೆ ಚಿನ್ನದಂಬಾರಿ ಹೊತ್ತು ಕ್ಯಾಪ್ಟನ್‌ ಅಭಿಮನ್ಯು ಪುಷ್ಪಾರ್ಚನೆ ಸ್ಥಳಕ್ಕೆ ಸುಮಾರು 400 ಮೀ. ಸಾಗಿದ್ದು ಅಭಿಮನ್ಯು ಎಡಬಲದಲ್ಲಿ ಕುಮ್ಕಿ ಆನೆಗಳಾಗಿ ಹಿರಣ್ಯ ಮತ್ತು ಲಕ್ಷ್ಮಿ ಆನೆಗಳು ಹೆಜ್ಜೆ ಹಾಕಿದ್ದವು. ಒಂದೆಡೆ ಮೈಸೂರು ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಉತ್ಸವ ಮೂರ್ತಿ ಹೊತ್ತು ಗಜಪಡೆ ಹೆಜ್ಜೆ ಹಾಕಿತು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಕುಮ್ಕಿ ಆನೆಗಳಾಗಿ ಲಕ್ಷ್ಮಿ, ಹಿರಣ್ಯ ಆನೆಗಳು ಕ್ಯಾಪ್ಟನ್ ಅಭಿಮನ್ಯುಗೆ ಸಾಥ್ ನೀಡಿದ್ದವು.

Advertisement

750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಲಕ್ಷ ಲಕ್ಷ ಮಂದಿಗೆ ದರ್ಶನ ಭಾಗ್ಯ ಕರುಣಿಸಿದ್ದಾರೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ನಾಡದೇವತೆ ಕಂಡು ಲಕ್ಷಾಂತರ ಜನ ಪುನೀತರಾದರು. ನೀಲಿ ರೇಷ್ಮೆ ಸೀರೆ, ಹೂ ಅಲಂಕಾರದಲ್ಲಿ ಚಾಮುಂಡಿ ತಾಯಿ ಅಲಂಕೃತಗೊಂಡಿದ್ದರು.

ದಸರಾ ಉತ್ಸವಕ್ಕೆ ಕಲಾತಂಡಗಳ ಮೆರುಗು ನೀಡಿದ್ದವು. ಅರಮನೆ ಆವರಣದಲ್ಲಿ ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳ ಮೆರವಣಿಗೆ ಸಾಗಿತ್ತು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಕೊಡವರ ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ವೀರಭದ್ರ ಕುಣಿತ, ನಂದಿ ಕೋಲು, ನವಿಲು ನೃತ್ಯ, ಬೀಸು ಕಂಸಾಳೆ, ಗಾರುಡಿ ಗೊಂಬೆ ಹೀಗೆ ಹತ್ತು ಹಲವು ಕಲಾತಂಡಗಳು ರಾಜ್ಯ ಕಲಾ ಸಂಸ್ಕೃತಿಯನ್ನು ಸಾರಿದವು. ಕೀಲು ಕುದುರೆ, ಹುಲಿ ವೇಷ, ಚಂಡೇ ವಾದನ, ಹಕ್ಕಿಪಿಕ್ಕಿ ನೃತ್ಯ, ದೊಣ್ಣೆ ವರಸೆ ಹೀಗೆ ಅನೇಕ ಸಾಂಸ್ಕೃತಿಕ ಕಲೆ ದಸರಾಗೆ ಮಳೆಯ ನಡುವೆಯೂ ಮತ್ತಷ್ಟು ಮೆರುಗು ನೀಡಿತ್ತು.

ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಬಹಳ ವಿಜ್ರಂಭಣೆಯಿಂದ ಯಶಸ್ವಿಯಾಗಿ ನೆರವೇರಿತು. ಇನ್ನು ಮೈಸೂರಿನಲ್ಲಿ ದೀಪಾಲಂಕಾರ 10 ದಿನಗಳ ಕಾಲ ಮುಂದುವರಿಯಲಿದೆ ಎಂದು ಹೇಳಲಾಗಿದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement